ಎಸ್. ಗಿರಿಧರ್ ಅವರು ‘ಅಜೀಂ ಪ್ರೇಮ್ ಜಿ’ ವಿಶ್ವವಿದ್ಯಾಲಯದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಆಗಿದ್ದಾರೆ. ಅವರು ಅಜೀಂ ಪ್ರೇಮ್ ಜಿ ಫೌಂಡೇಷನ್ ನ ಆರಂಭಿಕ ಸದಸ್ಯರಲ್ಲಿ ಒಬ್ಬರು. ವ್ಯವಹಾರ ನಿರ್ವಹಣೆಯ ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲದ ಸೇವೆಯ ಬಳಿಕ, 18 ವರ್ಷಗಳ ಹಿಂದೆ ಅವರು ಫೌಂಡೇಷನ್ ಅನ್ನು ಸೇರಿದರು. ಈ ಫೌಂಡೇಷನ್, ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದಾಗ ಅವರು ಅದರ ಮೊದಲ ಮುಖ್ಯ ಕಾರ್ಯಾಚರಣೆ ಅಧಿಕಾರಿ ಹಾಗೂ ರಿಜಿಸ್ಟ್ರಾರ್ ಹುದ್ದೆಗಳನ್ನು ವಹಿಸಿಕೊಂಡರು. ಈಗ್ಗೆ ಅನೇಕ ವರ್ಷಗಳಿಂದ ತಾವು ಗಳಿಸಿದ ಸಮೃದ್ಧ ಅನುಭವವನ್ನೂ ಒಳನೋಟವನ್ನೂ ಬಳಸಿಕೊಂಡು ನಿಯತವಾಗಿ ಬರೆಯುತ್ತಿದ್ದಾರೆ. ಗಿರಿಧರ್ ಅವರಿಗೆ ತೀವ್ರ ಆಸಕ್ತಿ ಇರುವ ಇನ್ನೊಂದು ವಿಷಯವೆಂದರೆ- ಕ್ರಿಕೆಟ್. ಕ್ರೀಡೆಯ ವಿಷಯದಲ್ಲಿ ಅವರು ಸಹ ಲೇಖಕರಾಗಿರುವ ಎರಡು ಪುಸ್ತಕಗಳು ಮಿಡ್ ವಿಕೆಟ್ ಟೇಲ್ಸ್: ಫ್ರಂ ಟ್ರಂಪರ್ ಟು ತೆಂಡೂಲ್ ಕರ್ ಹಾಗೂ ಮುಂಬೈ ಟು ಡರ್ಬನ್: ಇಂಡಿಯಾಸ್ ಗ್ರೇಟೆಸ್ಟ್ ಟೆಸ್ಟ್ಸ್ ಓದುಗರಿಂದ ಮೆಚ್ಚುಗೆ ಪಡೆದಿವೆ.