ಲೇಖಕ ರವಿ ಸಿ. ಹಿರೇಮಠ ಅವರು ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ತಾಳಿಕೋಟೆಯವರು. ತಂದೆ ಚನ್ನಬಸಯ್ಯ, ತಾಯಿ ಶಾಂತಾಬಾಯಿ. ಪ್ರಾಥಮಿಕ-ಪ್ರೌಢಶಿಕ್ಷಣವನ್ನು ಮುದ್ದೆಬಿಹಾಳ ಹಾಗೂ ವಿಜಯಪುರದಲ್ಲಿ ಮುಗಿಸಿದರು. ಬಿ..ಎ. ಬಿ. ಇಡಿ, ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವೀಧರರು. ಕಲಬುರಗಿ ಆಕಾಶವಾಣಿಯಲ್ಲಿ 5 ವರ್ಷ ಸಹಾಯಕರಾಗಿ, ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ನಂತರ ವಿವಿಧ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ವರದಿಗಾರರಾಗಿ ಜೊತೆಗೆ, ಮಕ್ಕಳ ಸಾಹಿತ್ಯ ವೃದ್ಧಿಗಾಗಿ ( 1993) ಸಂಧ್ಯಾ ಸಾಹಿತ್ಯ ವೇದಿಕೆ ಹಾಗೂ ಮಕ್ಕಳ ಸಾಹಿತ್ಯ ವಿಮರ್ಶೆ ಪತ್ರಿಕೆಯಾಗಿ ‘ಸಂಧ್ಯಾ’ ಆರಂಭಿಸಿದ್ದಾರೆ. ಪರಿಸರ ಜಾಗೃತಿಗಾಗಿ ಸೃಷ್ಟಿ ನೇಚರ್ ಕ್ಲಬ್ ಸ್ಥಾಪಿಸಿದ್ದಾರೆ..
ರಾಜ್ಯದ ವಿವಿಧೆಡೆ ಮಕ್ಕಳ ಸಾಹಿತ್ಯ ಕಾರ್ಯಾಗಾರ, ಸಂವಾದ, ಉಪನ್ಯಾಸ ಮಾಲಿಕೆ, ಮಕ್ಕಳ ನಾಟಕೋತ್ಸವ ಆಯೋಜನೆಯೊಂದಿಗೆ ಬಾಲ ಪುರಸ್ಕಾರ ಹಾಗೂ ಕಥಾ ಪುರಸ್ಕಾರಗಳನ್ನು ನೀಡುತ್ತಿದ್ದಾರೆ.