ಕಾದಂಬರಿಕಾರ, ಉಪನ್ಯಾಸಕ, ಸಂಶೋಧಕ ರವೀಶ್ ಅವರು ರಾಮನಗರ ಜಿಲ್ಲೆಯ, ಕನಕಪುರ ತಾಲ್ಲೂಕಿನ ಯಡಮಾರನಹಳ್ಳಿ ಗ್ರಾಮದವರು. ಕರ್ಮಯೋಗಿ ಕರಿಯಪ್ಪರವರು ಸ್ಥಾಪಿಸಿರುವ ರೂರಲ್ ಕಾಲೇಜಿನಿಂದ ಬಿ. ಎ. ಪದವಿ ಗಳಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.
ಬಾಲ್ಯದಿಂದಲೇ ಸಾಹಿತ್ಯದೊಲವು ಮೊದಲಾಯಿತು. ತಮ್ಮ ಬರಹಗಳಲ್ಲಿ ಹಳ್ಳಿಗಾಡಿನ ಚಿತ್ರಣವನ್ನು ಕಣ್ಣು ಕಟ್ಟುವಂತೆ ಮೂಡಿಸಿ ಓದುಗರನ್ನು ನಿಬ್ಬೆರಗಾಗಿಸುತ್ತಾರೆ. ರವೀಶ್ ಅವರು ಮೂವತ್ತಕ್ಕೂ ಅಧಿಕ ಸಂಶೋಧನಾ ಲೇಖನಗಳು ಯು.ಜಿ.ಸಿ. ಮಾನ್ಯತೆ ಪಡೆದಿರುವ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಸಮಾಜಶಾಸ್ತ್ರ ಹಾಗೂ ಗ್ರಂಥಾಲಯ ವಿಭಾಗದಲ್ಲೆರಡರಲ್ಲೂ ಸಮಾನ ಆಸಕ್ತಿ ಹೊಂದಿದ್ದಾರೆ. ಸ್ಪಂದನೀಯ, ಚಿಂತನಾಶೀಲ ಬರವಣಿಗೆಗಾರ ರವೀಶ್ ‘ಮೂಕ ಮನಸು’, ‘ಭೋಗದ ನಾಡಿಂದ ತ್ಯಾಗದ ಮಣ್ಣಿಗೆ’ ಹಾಗೂ ‘ಮುಂಜಾವಿನ ಮೌನ’ ಎಂಬ ಕಾದಂಬರಿಗಳನ್ನು ರಚಿಸಿದ್ದಾರೆ.