ಕವಿ, ನಾಟಕಕಾರ ರಘುನಂದನ ವೃತ್ತಿನಿರತ ನಿರ್ದೇಶಕ, ರಂಗಕಲೆಯ ಅಧ್ಯಾಪಕರು. ಸಮುದಾಯ ಸಂಘಟನೆಯಲ್ಲಿ ಹಲವು ವರ್ಷಗಳ ಕಾಲ ತೊಡಗಿಕೊಂಡಿದ್ದು, ಕನ್ನಡ ನಾಡಿನ ಉದ್ದಗಲ ಕೆಲಸಮಾಡಿದ್ದಾರೆ. ಬಳಿಕ ಮೈಸೂರಿನ ರಂಗಾಯಣದಲ್ಲಿ, ಅದು ಆರಂಭಗೊಂಡಾಗಿ ನಿಂದ ತೊಡಗಿ, ಹನ್ನೆರಡು ವರ್ಷಗಳ ಕಾಲ ಅಭಿನಯ ಶಿಕ್ಷಕರಾಗಿದ್ದರಲ್ಲದೆ, ಆ ಸಂಸ್ಥೆಯದೇ ನಾಟಕಕಾರರಾಗಿದ್ದರು. ಅಲ್ಲಿನ ರಂಗನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಹಲವು ದಶಕಗಳಿಂದ ನೀನಾಸಮ್ ಸಂಸ್ಥೆಯ ಒಡನಾಡಿ ಆಗಿದ್ದು, ಸಂಸ್ಥೆ ನಡೆಸುವ ರಂಗಶಿಕ್ಷಣ ಕೇಂದ್ರದಲ್ಲಿಯೂ, ತಿರುಗಾಟ ತಂಡದಲ್ಲಿಯೂ ಅಧ್ಯಾಪನ, ರಂಗನಿರ್ದೇಶನ ಮಾಡಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆ, ನವದೆಹಲಿ, ಮತ್ತು ತ್ರಿಶ್ಶೂರ್ ನಾಟಕ ಶಾಲೆ, ಕೇರಳ-ಇವುಗಳಿಂದ ಮೊದಲುಗೊಂಡು ಹಲವು ಸಂಸ್ಥೆಗಳಲ್ಲಿ ಅನೇಕ ವರ್ಷ ಸಂದರ್ಶಕ ಪ್ರಾಧ್ಯಾಪಕರಾಗಿ, ರಂಗನಿರ್ದೇಶಕರಾಗಿ ಕೆಲಸಮಾಡಿದ್ದಾರೆ. ಇವರು ಪದ್ಯರೂಪ ಕೊಟ್ಟು ಕನ್ನಡಕ್ಕೆ ತಂದ ನಾಟಕಗಳು, ಕಾಳಿದಾಸನ ಶಾಕುಂತಲ, ಭಾಸನ ಪ್ರತಿಮಾನಾಟಕ, ಯೂರಿಪಿಡೀಸನ ಹಿಪ್ಪೋಲಿಟಸ್, ಇಬೆನ್ಸ್ ನ ಪಿಯರ್ ಗ್ಯುಂಟ್ ಮತ್ತು ಎನ್ ಎನಿಮಿ ಆಫ್ ದ ಪೀಪಲ್, ಇತ್ಯಾದಿ.
ರಘುನಂದನ ಅವರ ಕೊಡುಗೆಯನ್ನು ಗಮನಿಸಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು 2018ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಿತ್ತು. ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ, ಕೋಮುದ್ವೇಷ, ವಿದ್ಯಾರ್ಥಿಗಳ ಮೇಲಿನ ಹಲ್ಲೆ-ದಾಳಿಗಳ ಹಿನ್ನೆಲೆಯಲ್ಲಿ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದರು. ನಿರಾಕರಿಸುವ ಸಂದರ್ಭದಲ್ಲಿ ’ಇದು ಪ್ರತಿಭಟನೆಯಲ್ಲ; ವ್ಯಥೆ; ಸ್ವೀಕರಿಸಲಾಗದ ಅಸಹಾಯಕತೆ’ ಎಂದು ಅಭಿಪ್ರಾಯಪಟ್ಟಿದ್ದರು.
ಕೃತಿಗಳು: ತುಯ್ತವೆಲ್ಲ ನವ್ಯದತ್ತ.. ಅಂದತ್ತರ ಉಯ್ಯಾಲೆ ಮತ್ತು ಅದರ ಸುತ್ತ, ನಾನು ಸತ್ತ ಮೇಲೆ