ಆರ್. ದಿಲೀಪ್ ಕುಮಾರ್ ಅವರ ಹುಟ್ಟಿದ್ದು1991 ರ ಮಾರ್ಚ್ 16ರಂದು ಮೈಸೂರಿನಲ್ಲಿ. ಮೈಸೂರುನಲ್ಲಿ ಕೆಲವು ಕಾಲ ಇದ್ದು ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿ ಶಿಕ್ಷಣವನ್ನು ಸರಕಾರಿ ಪದವಿ ಕಾಲೇಜು ಚಾಮರಾಜನಗರದಲ್ಲೂ, ಕನ್ನಡ ಸ್ನಾತಕೋತ್ತರದ ಪದವಿಯನ್ನು ಕನ್ನಡ ಸ್ನಾತಕೋತ್ತರ ಕೇಂದ್ರ , ಜೆ ಎಸ್ ಎಸ್ ಕಾಲೇಜು , ಚಾಮರಾಜನಗರದಲ್ಲೂ, ಬಿ ಎಡ್ ಪದವಿಯನ್ನು ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯ ಚಾಮರಾಜನಗರದಲ್ಲೂ ಪಡೆದಿದ್ದಾರೆ. ನಾಲಕ್ಕು ವರ್ಷಗಳು ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆಗಳಲ್ಲಿನ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಚಿಕ್ಕವಯಸ್ಸಿನಿಂದಲೇ ಸಾಹಿತ್ಯ, ಸಂಗೀತ ಮತ್ತು ಚಿತ್ರಕಲೆಗಳಲ್ಲಿ ಸಮಾನ ಆಸಕ್ತಿಯಿದ್ದು. ಸದ್ಯ ಕಾವ್ಯ, ವಿಮರ್ಶೆ, ಭಾಷಾಂತರ, ಸಂಶೋಧನೆ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯು.ಜಿ.ಸಿ ಸೆಮಿನಾರ್ ಗಳಲ್ಲಿ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದು ಅವರ ಲೇಖನಗಳು ಮೆಚ್ಚುಗೆ ಪಡೆದಿವೆ. ಚಾಮರಾಜನಗರದ ಪ್ರಾದೇಶಿಕ ಪತ್ರಿಕೆಯಲ್ಲಿ ಹಲವು ಲೇಖನಗಳು ಪ್ರಕಟವಾಗಿದೆ. ಮಯೂರದಲ್ಲಿ ಮೊದಲು ಕವನವೊಂದು ಪ್ರಕಟವಾಗಿದ್ದು, ಆನಂತರ ಅಂತರ್ಜಾಲ ಪತ್ರಿಕೆಯಾದ ಕೆಂಡಸಂಪಿಗೆಯಲ್ಲಿ ಮತ್ತು ಜಾಲತಾಣ ಸುಗಮದಲ್ಲಿ ಕವನಗಳು ಪ್ರಕಟವಾಗಿದೆ. "ಹಾರುವ ಹಂಸೆ" ಕವನ ಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಯೋಜನೆಯ ಅಡಿಯಲ್ಲಿ ಗೋಮಿನೀ ಪ್ರಕಾಶನದಿಂದ ಪ್ರಕಟವಾಗುತ್ತಿರುವ ಇವರ ಮೊದಲ ಕವನ ಸಂಕಲನವಾಗಿದೆ .