ಪುರುಷೋತ್ತಮ ದಾಸ್ ಹೆಗ್ಗಡೆ ಮೂಲತಃ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದ ಕಲ್ಕುಣಿಕೆಯವರು. ತಂದೆ ಕೆ ಹುಚ್ಚಪ್ಪ ಮತ್ತು ತಾಯಿ ಸುನಂದಮ್ಮ. ಪದವಿ ಪೂರ್ವ ಕಾಲೇಜು ಶಿಕ್ಷಣವನ್ನು ಹುಣಸೂರಿನಲ್ಲಿ ಮುಗಿಸಿ ಮೈಸೂರಿನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದು 1995 ರಲ್ಲಿ ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ನೇಮಕಗೊಂಡು ಪ್ರಸ್ತುತ ಮುಖ್ಯ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕಾದ ಶಿಕ್ಷಣದ ಮಾಡೆಲ್ ಬಗ್ಗೆ ವಿವರಿಸುವ ‘‘Quadruplet Octagonal Model’’ ಎಂಬ ಆಂಗ್ಲಭಾಷೆಯ ಪುಸ್ತಕ , ಕನಕದಾಸರ ಸಮಗ್ರ ಸಾಹಿತ್ಯವನ್ನು ಸಾಮಾನ್ಯ ಜ್ಞಾನ, ಸಾಮಾಜಿಕ ಜ್ಞಾನ, ಸಾಂಪ್ರದಾಯಿಕ ಜ್ಞಾನ, ವೈಚಾರಿಕ ಜ್ಞಾನ ಮತ್ತು ಪಾರಮಾರ್ಥಿಕ ಜ್ಞಾನಗಳು ಎಂದು ವಿಭಾಗಿಸಿ ‘ಕನಕದಾಸರ ಜ್ಞಾನ ಸಿಂಚನ’ ಎಂಬ ಪುಸ್ತಕವನ್ನು ಬರೆದಿರುತ್ತಾರೆ. ಕಾಳಿದಾಸನ ಮೇಘದೂತದ ಶ್ಲೋಕಗಳನ್ನು ಅನುವಾದಿಸಿ ವಿಭಿನ್ನ ಕೋನಗಳಿಂದ ಅವಲೋಕನ ಮಾಡಿರುವ ‘ಕಾಳಿದಾಸನ ಮೇಘದೂತ’ ಎಂಬ ಪುಸ್ತಕವನ್ನು ರಚಿಸಿದ್ದಾರೆ. ರಾಮಾಯಣ ಕುರಿತಾದ ‘ಪುರುಷೋತ್ತಮಾಯಣ’ ಎಂಬ ಎರಡು ಭಾಗಗಳ ಕಾದಂಬರಿಯನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಹಾಗೂ ವರ್ತಮಾನದ ದೃಷ್ಟಿಕೋನದಿಂದ ಬರೆಯಲಾಗಿದ್ದು ಲೇಖಕರ ಮಹತ್ವಾಕಾಂಕ್ಷಿ ಕೃತಿಯಾಗಿದೆ.