ಸಾರಸ್ವತ ಲೋಕದಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಸಮಕಾಲೀನ ಕವಿ ನಿತೀನ್ ನೀಲಕಂಠೆ ,ಮೂಲತಃ ಬೀದರ್ ಜಿಲ್ಲೆಯ ಬಸವ ಕಲ್ಯಾಣದವರು. ತಮ್ಮ ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗೆ ವ್ಯಾಸಂಗ ಮುಗಿಸಿ, ಸದ್ಯ ಪದವಿ ಪೂರ್ವ ಕಾಲೇಜ್ ನಲ್ಲಿ ಉಪನ್ಯಾಸಕರಾಗಿದ್ದಾರೆ.
ಪ್ರಬಂಧ ರಚನೆ ಜೊತೆಗೆ ಹಲವು ವಚನಗಳನ್ನು ಬರೆದಿದ್ದಾರೆ. ’ಕೂಲಿಂಗ್ ಗ್ಲಾಸ್ ಕನಸುಗಳು’ ಮೊದಲ ಕವನ ಸಂಕಲನ 2018ರಲ್ಲಿ ಬಿಡುಗಡೆಗೊಂಡಿತು. ’ದಿಲ್ ಕಾ ದುಕಾನ್’ ಸೇರಿದಂತೆ ಇನ್ನೂ ಮೂರು ಪುಸ್ತಕಗಳು ಪ್ರಕಟಣೆಯ ಹಂತದಲ್ಲಿದೆ. ಕಾವ್ಯ ಮಿತ್ರ ಪ್ರಕಾಶನ ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷ ಮತ್ತು 13 ಕೃತಿಗಳಿಗೆ ಪ್ರಕಾಶಕರಾಗಿದ್ದಾರೆ. ಪ್ರೇತಾತ್ಮದ ಮನೆಯಲ್ಲಿ ಪುಸ್ತಕಕ್ಕೆ ಉತ್ತಮ ಪ್ರಕಾಶಕನೆಂದು ಕವಿ ವೃಕ್ಷ ಬಳಗ, ಬೆಂಗಳೂರು ಮತ್ತು H.S.R. A ಪ್ರಕಾಶದಿಂದ ಸನ್ಮಾನ, ಚೇತನ ಪ್ರಕಾಶನ ಹುಬ್ಬಳ್ಳಿ ಅವರಿಂದ ಚೇತನ ಸನ್ಮಾನ, ಬೀದರ್ ಕ್ಷೇಮಾಭಿವೃದ್ಧಿ ಸಂಘದಿಂದ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ', ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಯುಗಾದಿ ಕವಿಗೋಷ್ಠಿಯಲ್ಲಿ ’ಕನ್ನಡ ಸೇವಾ ರತ್ನ ಪ್ರಶಸ್ತಿ’ ಗೌರವಗಳಿಗೆ ಭಾಜನರಾಗಿದ್ದಾರೆ.