ನಿಂಗು ಸೊಲಗಿ ಅವರು ಮೂಲತಃ ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ರಂಗಮುಖೇನ ಶಿಕ್ಷಣ ನೀಡಿ, ರಂಗಭಾಷೆಯನ್ನು ಕಲಿಕಾ ಮಾಧ್ಯಮವಾಗಿ ಪರಿಗಣಿಸಿ ಪಾಠಗಳನ್ನು ಹೇಳಿಕೊಡುತ್ತಾ, ಶಾಲಾ ಅಂಗಳದಲ್ಲಿ ರಂಗ ಚಟುವಟಿಕೆಗಳನ್ನು ಸಂಘಟಿಸುತ್ತಾ ಬಂದಿದ್ದಾರೆ. ಹಲವಾರು ಮಕ್ಕಳ ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಪ್ರದರ್ಶಿಸುವ ಮೂಲಕ ತಮ್ಮ ರಂಗಭೂಮಿಯ ಅನುಭವಗಳನ್ನು ಗಟ್ಟಿಗೊಳಿಸುತ್ತಾ ಬಂದವರು. ವೃತ್ತಿ ಮತ್ತು ಪ್ರವೃತ್ತಿಗಳನ್ನು ಒಂದು ಮಾಡಿಕೊಂಡು, ಶಾಲೆಯಲ್ಲಿ ಮಕ್ಕಳ ರಂಗಭೂಮಿಯನ್ನು ಕಟ್ಟುತ್ತಾ, ತಮ್ಮ ಎಲ್ಲಾ ನಿರಂತರ ಚಟುವಟಿಕೆಗಳ ಅನುಭವಗಳನ್ನು ಕ್ರೋಢೀಕರಿಸಿ ಈ ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿದ್ದಾರೆ.