ಸಂಶೋಧಕ, ಲೇಖಕ ಎನ್. ಬಸವಾರಾಧ್ಯ ಅವರು ಮೂಲತಃ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಾರಸಿಂಹನಹಳ್ಳಿಯವರು. ನಂಜುಂಡಾರಾಧ್ಯ ಬಸವಾರಾಧ್ಯ ಇವರ ಕಾವ್ಯನಾಮ. 1926 ಫೆಬ್ರುವರಿ 20 ರಂದು ಜನಿಸಿದರು. ತಂದೆ ನಂಜುಂಡಾರಾಧ್ಯರು 3 ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸುಮಾರು 6 ವರ್ಷ ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದರು. ತಾಯಿ ಗಿರಿಜಮ್ಮ. ಗೌರಿಬಿದನೂರು ಹಾಗೂ ಬೆಂಗಳೂರಿನ ಶಿಕ್ಷಣ ಪಡೆದಿದ್ದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತದ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಸ್ನಾತಕ ವಿಶೇಷ ತಜ್ಞರಾಗಿ ವೃತ್ತಿಜೀವನ ಆರಮಭಿಸಿದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟು ಯೋಜನೆಯ ಮುಖ್ಯ ಸಂಪಾದಕರಿಗೆ ಸಹಾಯಕರಾಗಿ, ಉಪಸಂಪಾದಕರಾಗಿ ಹಾಗೂ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು.
ತೊರವೆ ರಾಮಾಯಣ, ತ್ರಿಪುರದಹನ ಸಾಂಗತ್ಯ, ಚಂದ್ರಹಾಸ ಕಥೆ, ಕನ್ನಡ ಗದ್ಯ ವಿಕಾಸ, ಅಬ್ಬಯಾರು ಚರಿತ್ರೆ, ಉದ್ಯೋಗ ಸಾರ, ಹರಿಶ್ಚಂದ್ರ ಕಾವ್ಯಂ, ಧರ್ಮನಾಥ ಪುರಾಣ, ಲಿಂಗೇಶ್ವರ ಸಾಂಗತ್ಯ, ದೇವಲಾಪುರ ನಂಜುಂಡ ವಿರಚಿತ ಮುಂತಾದ 27 ಕೃತಿಗಳನ್ನು ಸಂಪಾದಿಸಿದ್ದಾರೆ. ‘ತೊರೆವೆ ರಾಮಾಯಣ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಧರ್ಮನಾಥ ಪುರಾಣಂ’ ಕೃತಿಗೆ ಮೈಸೂರು ವಿ.ವಿ.ಯ ತೀ.ನಂ.ಶ್ರೀ. ಸ್ಮಾರಕ ಪ್ರಶಸ್ತಿ, ‘ಹರಿಶ್ಚಂದ್ರ ಕಾವ್ಯಂ’, ‘ಚೇರಮ ಕಾವ್ಯಂ’, ‘ಉದ್ಭಟದೇವ ಚರಿತೆ’ ಕೃತಿಗಳಿಗೆ ದೇವರಾಜ ಬಹದ್ದೂರ್ ಬಹುಮಾನ ದೊರೆತಿದೆ. ‘ರಾಜ್ಯೋತ್ಸವ ಪ್ರಶಸ್ತಿ, ಶ್ರೇಷ್ಠಸಾಹಿತಿ ಪ್ರಶಸ್ತಿ, ಸಂಶೋಧಕ ಶಿವರತ್ನ ಪ್ರಶಸ್ತಿ, ಶಿವಕಮಲ ಸಾಹಿತ್ಯ ಪ್ರಶಸ್ತಿ’ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ. ಅವರು 2013 ಡಿಸೆಂಬರ್ 06ರಂದು ನಿಧನರಾದರು.