ಕವಿ: ಮಲ್ಲಿನಾಥ್ ಆಲೇಗಾಂವ್ ಅವರು ಮೂಲತಃ ಕಲಬುರಗಿ ಜಿಲ್ಲೆ ಆಫಜಲಪುರ ತಾಲೂಕಿನ ಮಾಶಾಳ ಗ್ರಾಮದವರು. ತಂದೆ ಗುರಣ್ಣ ಆಲೇಗಾಂವ. ತಾಯಿ ಲಕ್ಷ್ಮೀಬಾಯಿ. ಸ್ವಗ್ರಾಮದಲ್ಲಿ ಏಳನೇ ತರಗತಿಯವರಿಗೆ ಅಭ್ಯಾಸ ಮಾಡಿದವರು. ಸೊಲ್ಲಾಪುರದ ಸಿದ್ದರಾಮೇಶ್ವರ ನಾಟ್ಯಸಂಘದ ಸ್ಥಾಪಕರು. ಸೊಲ್ಲಾಪುರದ ಸುಯೋಧನ ಕನ್ನಡ ಸಂಘದ ಕಾರ್ಯದರ್ಶಿ, ಮಾಶಾಳದ ಚೌಡೇಶ್ವರಿ ನಾಟ್ಯಸಂಘದ ಸಂಸ್ಥಾಪಕರು. ಮಾಶಾಳದ ಸರ್ಕಾರಿ ಪ್ರಾಥಮಿಕ ಶಾಲಾ ನಿರ್ದೇಶಕರು, ಕರ್ಜಿಗಿ ವಲಯದ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಅಧ್ಯಕ್ಷರು, ಕಲಬುರಗಿ ಜಿಲ್ಲೆ ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಗ್ರಾಮ ಸೇನಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಕರ್ಜಿಗಿ ವಲಯದ ಸಾಹಿತ್ಯ ಸಮ್ಮೇಳನದ ಗೌರವ ಅಧ್ಯಕ್ಷರಾಗಿದ್ದರು. ಖ್ಯಾತ ಕಲಾವಿದ ಹಾಗೂ ಚಲನಚಿತ್ರ ನಟಿ /ನಟರಾದ ಉಮಾಶ್ರೀ. ಶ್ರೀ ಪಂಕಜ. ಟೆನ್ನಿಸ್ ಕೃಷ್ಣ. ಷೇಕ್ ಮಾಸ್ಟರ್, ತಾಳಿಕೋಟಿ ರಾಜು, ಮಲ್ಲಿಕಾರ್ಜುನ ಮಡ್ಡೆ. ಬಸವರಾಜ್ ಗುಡಿಗೇರಿ ಅನೇಕರ ಜೊತೆಗೆ ನಾಟಕದಲ್ಲಿ ಅಭಿನಯಿಸಿದ್ದಾರೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಹಲವಾರು ಜಿಲ್ಲೆ -ಹಳ್ಳಿಯಲ್ಲಿ ತಾವು ಬರೆದ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಸ್ವಾತಂತ್ಯ್ರ ದಿನಾಚರಣೆ ಹಾಗೂ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಮಕ್ಕಳಿಗಾಗಿ ಇವರು 50 ಕಿರು ನಾಟಕಗಳು ಬರೆದಿದ್ದಾರೆ. ಇವರು ಒಟ್ಟು 21 ಸಾಮಾಜಿಕಗಳನ್ನು ನಾಟಕಗಳನ್ನು ರಚಿಸಿದ್ದು, ಆ ಪೈಕಿ, 6 ನಾಟಕಗಳು ಮಾತ್ರ ಪ್ರಕಟಗೊಂಡಿವೆ.
ಕೃತಿಗಳು: ಶ್ರೀಮಂತನ ಸೊಕ್ಕು, ಸತ್ಯ ಸಾಯಲಿಲ್ಲ ಸುಳ್ಳು ಉಳಿಯಲಿಲ್ಲ, ಜೀವನ ಸಂಘರ್ಷ , ಮಡದಿ ಮಾಡಿದ ಮೋಸ, ಗರತಿ ಗಂಗಾ , ಮಾಂಗಲ್ಯ ಕಾಣದ ಮುತ್ತೈದೆ.(ಇವೆಲ್ಲವೂ ನಾಟಕ ಕೃತಿಗಳು)
ಪ್ರಶಸ್ತಿ-ಪುರಸ್ಕಾರಗಳು: ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದಿಂದ ‘ನಿರ್ದೇಶಕ ರತ್ನ’ ಪ್ರಶಸ್ತಿ, ದಾವಣಗೆರೆಯ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿಯಿಂದ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿವೆ.