ಮಧುರಾ ತಾಮ್ಹನ್‌ಕರ್ ಮೂಲತಃ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರದವರು. ಅವರು ಸಾಗರದಲ್ಲಿಯೇ ಪ್ರಾಥಮಿಕ, ಹೈಸ್ಕೂಲ್ ಶಿಕ್ಷಣ ಮುಗಿಸಿದ ನಂತರ ಸಾಗರದ ಪ್ರತಿಷ್ಠಿತ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಬಿ.ಎವರೆಗೆ ಶಿಕ್ಷಣ ಪಡೆದರು. ಬಾಲ್ಯದಿಂದಲೇ ಡೈರಿ ಬರೆಯುವ ಅಭ್ಯಾಸ. ಬರವಣಿಗೆಗೆ ತಾಯಿ ಹಾಗೂ ಲೇಖಕಿಯಾದ ಮನೋರಮಾ ಅವರಿಂದಲೇ ಸ್ಫೂರ್ತಿ. ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಸದಾಶಿವ ರಾವ್ ಬಾಪಟ್ ಅವರು ಮಾದರಿ ಕೃಷಿಕ ಹಾಗೂ ವ್ಯಾಪಾರಿ. ಬಾಲ್ಯದಿದಲೇ ಭಾಷಣ, ಸಂಘಟನೆ, ಇತಿಹಾಸವನ್ನು ಓದಿ ಟಿಪ್ಪಣಿ ಮಾಡಿಕೊಳ್ಳುವುದು ಮಧುರಾ ಅವರ ಹವ್ಯಾಸ. ಆಟೋಟದಲ್ಲೂ ಭಾಗಿ. ದಿಲ್ಲಿಯ ಜನಕಪುರಿ ಕನ್ನಡ ಕೂಟದ ನಾಟಕಗಳಲ್ಲಿ ಅಭಿನಯ ಜೊತೆಗೆ ಕನ್ನಡ ಕೂಟದ ಮಹಿಳಾ ಪ್ರತಿನಿಧಿಯಾಗಿ ಭಾಗಿ, ಜನಕಪುರಿ ಮಹಿಳಾ ಮಂಡಳಿಯಲ್ಲಿ ಸಕ್ರಿಯರಾಗಿದ್ದರು. ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿದ್ದಾರೆ.