1990ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಬಿ.ಎ. ಪದವಿ ಪಡೆದರು. 1992ರಲ್ಲಿ ಕುವೆಂಪು ವಿ.ವಿ. ಯಿಂದ ಸಮಾಜಶಾಸ್ತ್ರ ವಿಷಯದಲ್ಲಿ ಎಂ.ಎ., ಪದವಿ ಪಡೆದು 1992 ರಿಂದ 1997ರವರೆಗೆ ಡಾ| ಎಚ್.ಎಂ. ಪಂಚಾಕ್ಷರಯ್ಯನವರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿ “ಕನ್ನಡ ಚಲನಚಿತ್ರಗಳಲ್ಲಿ ಸ್ತ್ರೀ ಪಾತ್ರ ನಿರೂಪಣೆ - ಒಂದು ಸಮಾಜ ಶಾಸ್ತ್ರೀಯ ಅಧ್ಯಯನ' ಎಂಬ ವಿಷಯದ ಮೇಲೆ ಮಹಾ ಪ್ರಬಂಧ ಸಾದರಪಡಿಸಿ ಕುವೆಂಪು ವಿ.ವಿ. ದಿಂದ ಪಿಎಚ್.ಡಿ. ಪದವಿ ಪಡೆದರು.
1992 ರಿಂದ ಎಸ್.ಕೆ.ಆರ್.ಎಸ್. ಕಾಲೇಜು, ನೇರಲಕೆರೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸದುರ್ಗ; ಕುವೆಂಪು ವಿ.ವಿ.ಯ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. 1998ರಿಂದ 2003ರವರೆಗೆ ಕುವೆಂಪು ವಿಶ್ವವಿದ್ಯಾನಿಲಯದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗ ಇಲ್ಲಿ ಸಮಾಜಶಾಸ್ತ್ರ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಪ್ರಸ್ತುತ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಮಹಿಳಾ ವಿಶ್ವ ವಿದ್ಯಾನಿಲಯ, ವಿಜಾಪುರ ಇಲ್ಲಿ ಸಮಾಜಶಾಸ್ತ್ರದ ರೀಡರ್ ಆಗಿ ಕೆಲಸ ಮಾಡುತ್ತಿದ್ದಾರೆ.
“ಭಾರತೀಯ ಸಮಾಜ ಮತ್ತು ಸಂಸ್ಕೃತಿ', “ಭಾರತೀಯ ಸಿನಿಮಾ ಪ್ರೇಕ್ಷಕರು ಮತ್ತು ಸ್ತ್ರೀ ಪಾತ್ರ”, 'ಸಮಾಜ ಶಾಸ್ತ್ರದ ಪರಿಕಲ್ಪನೆಗಳು”, “ಭಾರತೀಯ ಸಮಾಜದ ಪರಿಚಯ”, ಎಂಬಂತಹ ಕೃತಿಗಳನ್ನು ಬರೆದು ಪ್ರಕಟಿಸಿರುವ ಇವರು, ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ವಿಚಾರ ಸಂಕಿರಣ, ಕಾರ್ಯಾಗಾರಗಳಲ್ಲಿ ಭಾಗವಹಿಸಿ ಪ್ರಬುದ್ಧವಾದ ಪ್ರಬಂಧಗಳನ್ನು ಮಂಡಿಸಿ ಮೆಚ್ಚುಗೆ ಗಳಿಸಿದ್ದಾರೆ. ಇವರು ಮಹಿಳೆ, ಮಾಧ್ಯಮ, ಕಲೆ ಮತ್ತು ಸಾಹಿತ್ಯ ಸಮಾಜಶಾಸ್ತ್ರದಲ್ಲಿ ಹೆಚ್ಚಿನ ಸಂಶೋಧನೆಗಳನ್ನು ನಡೆಸುತ್ತಿದ್ದು ಅಮೂಲ್ಯ ಜ್ಞಾನ ಶಾಖೆಗಳನ್ನು ನೀಡುವರೆಂಬ ಭರವಸೆ ಮೂಡಿಸಿದ್ದಾರೆ