ಹಿರಿಯ ಲೇಖಕ ಕುಮಾರ ಕಕ್ಕಯ್ಯ ಪೋಳ್ ಅವರು ಶರಣ ಸಂಪ್ರದಾಯಸ್ಥರು. ವಚನಗಳ ಆಶಯವೇ ಜೀವನ ಶೈಲಿಯಾಗಿಸಿಕೊಂಡವರು. ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾಮದವರು. ಬಿ.ಎಸ್. ಪೋರ್ಳ ಎಂಬುದು ಇವರ ಮೂಲ ಹೆಸರು. ಕುಮಾರ ಕಕ್ಕಯ್ಯ ಪೋಳ್ ಎಂಬುದು ಕಾವ್ಯನಾಮ. ತಂದೆ ಸಾಯಬಣ್ಣ, ತಾಯಿ ರಾಯವ್ವ. ಗಾಂಧೀಜಿ ಅನುಯಾಯಿಗಳಾಗಿ ಸ್ವಾತಂತ್ಯ್ರ ಹೋರಾಠದಲ್ಲಿ ಧುಮುಕಿದ್ದರು. ಪೊಲೀಸರಿಂದ ಅವಮಾನ-ಹಿಂಸೆಗಳನ್ನು ಅನುಭವಿಸಿದರು. ಸಿಂದಗಿಯಲ್ಲಿ 7 ತರಗತಿಯವರೆಗೆ ಓದಿದರು. ನಂತರ, ವಿಜಯಪುರದ ಶ್ರೀ ಸಿದ್ದೇಶ್ವರ ಹೈಸ್ಕೂಲ್ ಸೇರಿ 9 ಹಾಗೂ 10 ತರಗತಿ ಪಾಸು ಮಾಡಿದರು. ತದನಂತರ, ಮುಂಬೈನ ಸೆಕೆಂಡರಿ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷನ್ ಬೋರ್ಡ್ ನಿಂದ (1951) ಎಸ್.ಎಸ್.ಸಿ ಪದವಿ ಪಡೆದರು. ಮುಂದೆ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸೋಲಾಪುರದ ದಯಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ಸೈನ್ಸ್ ತರಗತಿಗೆ ಸೇರಿದರು. ಆದರೆ, ಆರ್ಥಿಕ ತೊಂದರೆಯಿಂದ ಶಿಕ್ಷಣ ಪೂರ್ಣಗೊಳಿಸಲಿಲ್ಲ.
ಪ್ರಾಥಮಿಕ ಶಾಲೆಯಲ್ಲಿ ಇವರ ಹೆಸರು ‘ಭೀಮ್ಯಾ ಸಾಯಿಬ್ಯಾ ಡ್ವಾರ’ ಎಂದಿತ್ತು. ಹೈಸ್ಕೂಲ್ ನಲ್ಲಿ ‘ಭೀಮಣ್ಣ ಸಾಯಬಣ್ಣ ಡೋರ’ ಎಂದಾಯಿತು. 1952ರಲ್ಲಿ, ಬದಾಮಿ ಕೋರ್ಟ್ನಲ್ಲಿ ಅಫಿಡೆವಿಟ್ ಮೂಲಕ ತಮ್ಮ ಹೆಸರನ್ನು ‘ಭೀಮರಾವ್ ಸಾಯಬಣ್ಣಾ ಪೋಳ’ ಎಂದು ಮಾಡಿಸಿಕೊಂಡರು. ಸಾಹಿತ್ಯ ಕೃತಿಗಳಲ್ಲಿ ಬಿ.ಎಸ್.ಪೋಳ, ಚಾಂದಕವಠೆ ಎಂದೇ ಬರೆದುಕೊಂಡರು. ಶರಣ ಸಾಹಿತ್ಯ ರಚನೆ, ಬಸವಧರ್ಮದ ಸತ್ಯ ಓದಿನ ಫಲ ಎಂಬಂತೆ ‘ಕುಮಾರ ಕಕ್ಕಯ್ಯ ಪೋಳ’ ಆಗಿ, ಶರಣರಂತೆ ಬದುಕಿ ವಚನಗಳನ್ನು ರಚಿಸಿದರು. ಆರೋಗ್ಯ ಇಲಾಖೆ, ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.
ಕೃತಿಗಳು: ಧರ್ಮದ ಕಗ್ಗಂಟು (ಕಥೆಗಳ ಸಂಕಲನ), ನಿಯತಿ ಶಾಸನ (ಕಾದಂಬರಿ), ಗೀಜಗನ ಗೂಡು (ಕಾದಂಬರಿ), ಮೂಕ ಮಾತನಾಡಿದಾಗ (ಕವನ ಸಂಕಲನ), ಇದು ನನ್ನ ಸಮಾಜ (ನಾಟಕ-1961), ಪ್ರಗತಿಪರ ವಿಚಾರವಾದಿ ಕುಮಾರ ಕಕ್ಕಯ್ಯನ ವಚನಗಳು-1993), ಕುಮಾರ ಕಕ್ಕಯ್ಯ ಪೋಳ ಅವರ ವಚನಗಳು-1979),