ಕಿಕ್ಕೇರಿ ನಾರಾಯಣ ಅವರು ಹುಟ್ಟಿದ್ದು 2ಮೇ 1946 ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೋಕಿನ ಕಿಕ್ಕೇರಿಯಲ್ಲಿ. ಕಿಕ್ಕೇರಿ, ಮೈಸೂರು, ಪೂನಾಗಳಲ್ಲಿ ವಿದ್ಯಾಭ್ಯಾಸ, ಪದವಿ ತರಗಳಿಯಲ್ಲಿರುವಾಗಲೇ ಸಹಪಾಠಿ ವಿ.ಎನ್.ಲಕ್ಷ್ಮೀನಾರಾಯಣರ ಜೊತೆಗೂಡಿ ಕ್ಷೇತ್ರಕಾರ್ಯ ಮಾಡಿ ತುಂಬೆ ಹೂವಿಟ್ಟು ಶರಣೆನ್ನಿ ಎಂಬ ಜನಪದ ಗೀತೆಗಳ ಸಂಕಲನವನ್ನು ಸಂಪಾದಿಸಿ ಪ್ರಕಟಿಸಿದ್ದರು. ಜೇನು ಕುರುಬರ ಕನ್ನಡವನ್ನು ಅಧ್ಯಯನ ಮಾಡಿ ಅದರ ನಿಘಂಟು ಮತ್ತು ಆ ಭಾಷೆಯಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದ್ದರು. 11ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟಿಸಿದ್ದರು , ಬಿದಿರು ಮಂಡಲ ನಾಟಕ ತುಂಬ ಜನಪ್ರಿಯವಾಗಿತ್ತು. (ಜೇನು ಕುರುಬ ಯುವಕರೇ ಅಭಿನಯಿದ್ದು ವಿಶೇಷ).
ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ದೀರ್ಘಕಾಲ ಸಂಶೋಧನೆಯ ಸೇವೆಯಲ್ಲಿದ್ದು, ಸಾಹಿತ್ಯ ಕೃತಿಗಳ ರಾಚನಿಕ ಮತ್ತು ರಾಚನಿಕೋತ್ತರ ಅಧ್ಯಯನಗಳನ್ನು ಮಾಡಿದ್ದರು. ಅವರ ಭಾಷಾವಿಜ್ಞಾನ ಮತ್ತು ಜಾನಪದ ವಿದ್ವತ್ತನ್ನು ವಿದೇಶಗಳ ವಿಶ್ವವಿದ್ಯಾಲಯಗಳು ಗೌರವಿಸಿದ್ದವು. ಆನೆಯಾಗಿ ಬರೋಣು, ಕಾಡುಕೋಳಿ ಜೋಡಿ ನವಿಲು(ನಾಟಕ), ಜೇನ್ನುಡಿ (ಬಹುಭಾಷಿಕ ನಿಘಂಟು), ಜೇನುಕುರುಬ ಅವ್ಯಕ್ತ ಜಾನಪದ ಸಾಂಸ್ಕೃತಿಕ ಪರಂಪರೆ, ಬುಡಕಟ್ಟು ಸಂಸ್ಕೃತಿ (ವಿದ್ವತ್ ಕೃತಿಗಳು), ಬಾಲಂಗೋಚಿ (ಸಾಮಾಜಿಕ ಕಾದಂಬರಿ) ಜೊತೆಗೆ ಹಲವು ಲೇಖನಗಳು, ಕವಿತೆಗಳು ಪ್ರಕಟಗೊಂಡಿವೆ. ಕಿಕ್ಕೇರಿ ತಾಲೋಕಿನ ಎರಡನೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸೇರಿದಂತೆ ಹಲವು ಗೌರವಗಳು ಸಂದಿದ್ದವು.ಇವರ ಬಹುಭಾಷಿಕ ಅನುವಾದಕ್ಕಾಗಿ ಯುನೆಸ್ಕೋ ಗೌರವಿಸಿತ್ತು. ಬುಡಕಟ್ಟು ಅಧ್ಯಯನಕ್ಕೆ ರತನ್ ಟಾಟ ಮೊದಲ ಫೆಲೋಷಿಪ್ ಪಡೆದಿದ್ದರು. ಮೈಸೂರಿನ ವೈಚಾರಿಕ ಲೋಕದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ನಾರಾಯಣ ಅವರು 10-1-2017 ರಂದು ನಿಧನರಾದರು.