ಕನ್ನಡದ ನವೋದಯ ಕವಿ- ಸಾಹಿತಿಗಳ ಪೈಕಿ ಕಡೆಂಗೋಡ್ಲು ಶಂಕರಭಟ್ಟರು ಪ್ರಮುಖರು. 1904ರ ಆಗಸ್ಟ್ 9ರಂದು ಜನಿಸಿದರು. ತಂದೆ ಈಶ್ವರಭಟ್ಟ ತಾಯಿ ಗೌರಮ್ಮ. ಪ್ರಾರಂಭದ ವಿದ್ಯಾಭ್ಯಾಸ ಮುಳಿಯ ತಿಮ್ಮಪ್ಪಯ್ಯನವರ ಮನೆಯಲ್ಲಿ ಮಂಗಳೂರಿನಲ್ಲಿ ನಡೆಯಿತು. ಮದರಾಸಿನ ವಿಶ್ವವಿದ್ಯಾನಿಲಯದಲ್ಲಿ ವಿದ್ವಾನ್ ಪದವಿ ಗಳಿಸಿದರು.
1927ರಲ್ಲಿ ಮಂಗಳೂರಿನ ಸೆಂಟ್ ಅಗ್ನೆಸ್ ಕಾನ್ವೆಂಟಿನಲ್ಲಿ ಕನ್ನಡ ಅಧ್ಯಾಪಕ ಕೆಲಸಕ್ಕೆ ಸೇರಿ 1964ರಲ್ಲಿ ನಿವೃತ್ತರಾದರು. ರಾಷ್ಟ್ರಬಂಧು ಪತ್ರಿಕೆಯ (1953-1968) ಸಂಪಾದಕರಾಗಿದ್ದರು, 1927ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ‘ಪಂಚಕಜ್ಜಾಯ’ ನೆನಪಿನ ಸಂಚಿಕೆಗೆ ಶ್ರಮಿಸಿದರು. ನವಯುಗ, ರಾಷ್ಟ್ರಮತ ವಾರಪತ್ರಿಕೆಗಳಿಗೂ ಸ್ವಲ್ಪ ಕಾಲ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. 1932ರಲ್ಲಿ ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರು ಆಗಿದ್ದರು. 1936ರಲ್ಲಿ ಜರುಗಿದ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಕಾರವಾರದಲ್ಲಿ ನಡೆದ 45 ನೇ ಕನ್ನಡ ಸಾಹಿತ್ಯ ಸಮ್ಮೇಳನ (1965) ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿ ರಚಿಸಿರುವ ಅವರು 1968ರ ಮೇ 17ರಂದು ನಿಧನರಾದರು.
ಕಡೆಂಗೋಡ್ಲು ಶಂಕರಭಟ್ಟರ ಮುಖ್ಯ ಕೃತಿಗಳು :ಘೋಷಯಾತ್ರೆ (ಕಾವ್ಯ), ಪತ್ರಪುಷ್ಪ, ನಲ್ಮೆ, ಗಾಂಧಿ ಸಂದೇಶ (ಕವನ ಸಂಕಲನಗಳು), ದೇವತಾಮನುಷ್ಯ, ಧೂಮಕೇತು, ಹೊನ್ನಿಯ ಮದುವೆ (ಕಾದಂಬರಿಗಳು), ಗಾಜಿನ ಬಳೆ, ದುಡಿಯುವ ಮಕ್ಕಳು (ಕಥಾ ಸಂಕಲನಗಳು), ಸ್ವರಾಜ್ಯ ಯುದ್ಧ (ಅನುವಾದ), ವಿರಾಮ (ಏಕಾಂಕ ನಾಟಕ)