ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನ ಹರುವೆ ಗ್ರಾಮದವರು. (ಜನನ: 08-05-1926) ತಂದೆ ವೆಂಕಟರಾವ್, ತಾಯಿ ರಾಜಮ್ಮ. ಓದಿದ್ದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೇಟವರೆಗೆ. ಜನವಾಣಿ ಪತ್ರಿಕೆಯಲ್ಲಿ ಉದ್ಯೋಗ. ಜಾಮತ ವಾರಪತ್ರಿಕೆಯ (1973) ಮುಖ್ಯಸಂಪಾದಕರಾದರು. ರಷ್ಯಕ್ಕೆ ಭೇಟಿ ನೀಡಿ ಬಂದನಂತರ ಪ್ರವಾಸ ಕಥನ ‘ನವರಷ್ಯದ ನೋಟ’ ಬರೆದರು. ಕರ್ನಾಟಕ ಸಾಹಿತ್ಯ ಅಕಾಡಮಿಯ ದ್ವಿತೀಯ ಬಹುಮಾನ ಪಡೆಯಿತು. ಹಿಂದಿಗೂ ಅನುವಾದಗೊಂಡಿತು. ಮೊದಲ ಕಥಾ ಸಂಕಲನ ‘ಕತ್ತಲೆಬೆಳಕು’. ಇಲ್ಲಿಯ ರಂಗಾಶಾಮಿ ಕಥೆಯು, ಕೆ.ನರಸಿಂಹಮೂರ್ತಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಾಗಿ ಸಂಪಾದಿಸಿದ ‘ಅತ್ಯುತ್ತಮ ಸಣ್ಣ ಕಥೆಗಳು’ ಸಂಕಲನದಲ್ಲಿದೆ. ಇದೇ ಕಥೆಯು ಇಂಗ್ಲಿಷ್ಗೂ ಅನುವಾದಗೊಂಡಿದೆ. ‘ಐದು ದೀಪಗಳ ಕಲಂಬ’ ಮತ್ತೊಂದು ಕವನ ಸಂಕಲನ. ‘ಸೃಜನಶೀಲ’- ಟಿ.ಎಸ್. ಎಲಿಯಟ್, ಟಾಯ್ನಬಿ ಯಿಂದ ಹಿಡಿದು ಪು.ತಿ.ನ., ಅ.ನ.ಕೃ., ಕಾರಂತ, ರಾವಬಹದ್ದೂರ್, ಕೆ.ಕೆ. ಹೆಬ್ಬಾರ್, ಪಂಡಿತ್ ರವಿಶಂಕರ್ ಇತರರ ವ್ಯಕ್ತಿಚಿತ್ರಗಳಿರುವ ಕೃತಿ. ಪಶ್ಚಿಮ ಜರ್ಮನಿಯ ಪ್ರವಾಸ ಕೈಗೊಂಡು ಇಂಗ್ಲೆಂಡ್ಗೂ ಭೇಟಿ ನೀಡಿದ್ದರು. ‘ಮನದ ತೆರೆಯ ಮೇಲೆ’ ಪ್ರಬಂಧಗಳ ಸಂಕಲನ .ಶ್ರೀಪಾದರಾಜ ಮತ್ತು ಎಂ.ವೆಂಕಟಕೃಷ್ಣಯ್ಯ (ಮೈಸೂರುತಾತಯ್ಯ) ವ್ಯಕ್ತಿ ಚಿತ್ರಗಳು, ರಾಷ್ಟ್ರೋತ್ಥಾನ ಪರಿಷತ್ನ ಭಾರತಭಾರತಿ ಪುಸ್ತಕ ಸಂಪದಕ್ಕಾಗಿ ‘ದಾದಾಬಾಯಿ ನವರೋಜಿ’ಯವರ ಬಗ್ಗೆ ಮತ್ತು ಕಲಾವತಿ ಹಾಗೂ ಅಮರಾವತಿಯ ಅರಸುಕುಮಾರ- ಎರಡು ನೀಳ್ಗತೆಗಳನ್ನು ಮಕ್ಕಳಿಗಾಗಿ ರಚಿಸಿದ್ದಾರೆ.
ಇವರು ಪ್ರಜಾಮತ ಪತ್ರಿಕೆಗಾಗಿ ಬರೆದ ಸಂಪಾದಕೀಯ ಲೇಖನಗಳು ಸಂಪುಟ-1 ಪ್ರಕಟಗೊಂಡಿದೆ. 1980ರಲ್ಲಿ ಜ್ಞಾನಜ್ಯೋತಿ ಕಲಾವೃಂದದಿಂದ ಪತ್ರಿಕಾ ಸಾಹಿತ್ಯ ರತ್ನ’ ಮತ್ತು ಜನಸೇವಾ ಪರಿಷತ್ತಿನಿಂದ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ‘ಸಂಪಾದಕ ಕೇಸರಿ’ ಬಿರುದು ದೊರೆತಿವೆ. ಇವರು 09-02-1992 ರಂದು ನಿಧನರಾದರು.