About the Author

ಪ್ರಕಾಶಕ, ಬರಹಗಾರ, ಪ್ರಾಧ್ಯಾಪಕ ಹೀಗೆ ಹಲವು ಹೊಣೆಗಾರಿಕೆ ಸಮರ್ಥವಾಗಿ ನಿರ್ವಹಿಸಿದ ಪ್ರೊ. ಎಚ್. ಎಂ. ಶಂಕರನಾರಾಯಣ ರಾವ್,  1935-1990ರ ಅವಧಿಯಲ್ಲಿ, ಕನ್ನಡ ಕವಿಕಾವ್ಯ ಮಾಲೆ ಅಥವಾ ಶಾರದಾ ಮಂದಿರ ಪ್ರಕಾಶನ ಸಂಸ್ಥೆ ಯಿಂದ ಉತ್ತಮ ಕೃತಿಗಳನ್ನು ಪ್ರಕಟಿಸಿದ್ದರು.

ಇವರು ಮೂಲತಃ ದಾವಣಗೆರೆ ಜಿಲ್ಲೆಯ ಹರಿಹರದವರು. ಹರಿಹರೇಶ್ವರ ದೇವಾಲಯದ ಅರ್ಚಕ ಮಲ್ಲಾರಿ ಭಟ್ಟ ಮತ್ತು ಭೀಮಕ್ಕ ಅವರ ಪುತ್ರರು. (ಜನನ: 21-11-1913)  ಹರಿಹರ ಮತ್ತು ದಾವಣಗೆರೆಯಲ್ಲಿ ಪ್ರೌಢ ಶಿಕ್ಷಣ ನಂತರ ಮೈಸೂರಿನಲ್ಲಿ ಉನ್ನತ ಶಿಕ್ಷಣ ಪಡೆದರು.

ವಾರನ್ನ ತಿಂದೇ ಎಂ.ಎ. ಪದವೀಧರರಾದರು. ಮೈಸೂರಿನ ಬನುಮಯ್ಯ ಹೈಸ್ಕೂಲಿನಲ್ಲಿ ಉಪಾಧ್ಯಾಯರಾದರು. ನಂತರ, 1945ರಲ್ಲಿ ಶಾರದಾ ವಿಲಾಸ ಕಾಲೇಜಿನಲ್ಲಿ ಪೂರ್ಣಕಾಲಿಕ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ (1975) ನಿವೃತ್ತರಾದರು. ಇವರು ಮೊದಲ ಕೃತಿ ಬರೆದಿದ್ದೇ ರಾಘವಾಂಕನ ಬಗ್ಗೆ. ತಾವೇ ಪ್ರಕಟಿಸಿದ್ದು ವಿಶೇಷ. ಹೀಗೆ ಪುಸ್ತಕ ಪ್ರಕಾಶನದಲ್ಲಿ ಬೆಳೆದ ಆಸಕ್ತಿ ಅರಳಿ ಅರಳಿ ಕನ್ನಡ ಸಾಹಿತ್ಯ ವಲಯದಲ್ಲಿ ಉತ್ತಮ ಕೃತಿಗಳ ಪ್ರಕಟಣೆಗೆ ಕಾರಣವಾಯಿತು. ಈವರೆಗೆ ಸುಮಾರು 400ಕ್ಕೂ ಅಧಿಕ ಕೃತಿಗಳು (ಶಾರದಾ ಮಂದಿರ ಪ್ರಕಾಶನ)  ಪ್ರಕಟವಾಗಿವೆ. 

ಕೃತಿಗಳು: ಶಂಕರನಾರಾಯಣ ರಾವ್‌ ಅವರು ಪ್ರಸಿದ್ಧರ ಕೃತಿಗಳನ್ನು ಪ್ರಕಟಿಸಿದ್ದು ಮಾತ್ರವಲ್ಲ; ತಾವೂ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. ಹರಿಹರ ದೇವಾಲಯ ( ಸಂಶೋಧನಾತ್ಮಕ ಕೃತಿ ),   ಕವಿ ರಾಘವಾಂಕ, ಚಂದ್ರಗುಪ್ತ ವಿಜಯ, ಕೆಂಪು ನಾರಾಯಣ, ಮುದ್ರೆಯುಂಗುರ, ಮೃಚ್ಛಕಟಿಕ ಪ್ರಕರಣ, ಕರ್ನಾಟಕ ಶಾಕುಂತಲ ನಾಟಕ, ಅಲ್ಲಾವುದ್ದೀನ್ ಮತ್ತು ಅದ್ಭುತ ದೀಪ,  ಯಶೋಧರ ಚರಿತೆ, ಮಧ್ಯಮ ವ್ಯಾಯಾಮ ಯೋಗ ಇತ್ಯಾದಿ ಕೃತಿಗಳು. 2009ರಲ್ಲಿ ಪ್ರೊ. ಎಚ್.ಎಂ. ಶಂಕರನಾರಾಯಣ ರಾಯರ ಸ್ಮರಣೆಗಾಗಿ ‘ಶಂಕರ ಸ್ಮ್‌ಋತಿ’ ಪ್ರಕಟವಾಗಿದೆ. 

ಪ್ರಶಸ್ತಿ-ಗೌರವಗಳು: ಈ ಪ್ರಕಾಶನದಿಂದ ಬಂದ ಕೃತಿಗಳು ಕೇಂದ್ರ ಸಾಹಿತ್ಯ ಅಕಾಡಮಿ, ರಾಜ್ಯ ಸಾಹಿತ್ಯ ಅಕಾಡಮಿ ಮತ್ತು ಸೋವಿಯತ್ ಲ್ಯಾಂಡ್ ಪ್ರಶಸ್ತಿಗಳನ್ನುಪಡೆದಿವೆ. 1997ರ ಸೆಪ್ಟೆಂಬರ್ 17ರಂದು ಶಂಕರನಾರಾಯಣ ರಾವ್‌ (84) ನಿಧನರಾದರು. 

 

ಎಚ್.ಎಂ. ಶಂಕರನಾರಾಯಣ ರಾವ್

(23 Nov 1913-17 Sep 1967)