ಗಂಗಪ್ಪ ತಳವಾರ ಮೂಲತಃ ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದವರು. ತಾಯಿ- ಮೋಟಮ್ಮ, ತಂದೆ- ಚಿನ್ನಪ್ಪ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆಯಲ್ಲಿ ಕನ್ನಡ ಎಂಎ ಹಾಗೂ ಬಿಎಡ್ ಪದವಿಗಳಲ್ಲಿ ತೇರ್ಗಡೆಯಾಗಿದ್ದಾರೆ. ಮೊದಲಿಗೆ ಗಂಗಪ್ಪ ಎಂಬ ಹೆಸರಿದ್ದ ಇವರು ಊರಿನಲ್ಲಿ ತಳವಾರಿಕೆ ‘ಕುಳವಾಡಿ' ಚಾಕರಿ ಮಾಡುತ್ತಿದ್ದ ಕಾರಣ ಮನೆತನಕ್ಕೆ ಅಂಟಿಕೊಂಡಿದ್ದರಿಂದ ತಳವಾರಿಕೆ ಹೆಸರಿಗಂಟಿ 'ಗಂಗಪ್ಪ ತಳವಾರ್' ಎಂಬ ಹೆಸರಿನಲ್ಲಿಯೇ ಬರವಣಿಗೆ ಆರಂಭಿಸಿದರು.
ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರದ ಸಹಕಾರದೊಂದಿಗೆ ದಲಿತ ಸಂಘರ್ಷ ಸಮಿತಿ, ಗೌರಿಬಿದನೂರು ಪ್ರಕಟಿಸಿದ 'ಮೋಹನಗಾನ' ಎಂಬ ವ್ಯಕ್ತಿಚಿತ್ರವನ್ನು ಸಂಪಾದಿಸಿದ್ದಾರೆ. ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರದಿಂದ ಸಂಗ್ರಹಿಸಲಾದ ರಾಜ್ಯಮಟ್ಟದ ಸಮಗ್ರ ತತ್ವಪದಗಳ ಮಾಲಿಕೆಯಲ್ಲಿ ಕೋಲಾರದ ಘಟ್ಟಹಳ್ಳಿ ಆಂಜಿನಪ್ಪನವರ ಸಮಗ್ರ ತತ್ವಪದಗಳ ಕನ್ನಡ ಭಾವಾನುವಾದ ಸಂಪುಟ ಅಚ್ಚಿನಲ್ಲಿದೆ. ಮೂವತ್ತು ಜನ ಸಂತ ಜೀವಿಗಳ ಕುರಿತಾದ ಸಂಶೋಧನಾ ಕೃತಿ ಹಾಗು ಲಕ್ಕೂರು ಅವಧೂತ ಕೃಷ್ಣಸ್ವಾಮಿ ಕುರಿತ ಕೃತಿ ಅಚ್ಚಿಗೆ ಸಿದ್ಧವಾಗಿದೆ.
ಬೆಂಗಳೂರಿನ ಕ್ರೈಸ್ಟ್ ಕಾಲೇಜು ಮತ್ತು ಎಸ್.ಜೆ.ಆರ್.ಸಿ ಕಾಲೇಜುಗಳು ಏರ್ಪಡಿಸಿದ್ದ ರಾಜ್ಯಮಟ್ಟದ ಅಂತರ ಕಾಲೇಜು ಕಾವ್ಯ ಸ್ಪರ್ಧೆಯಲ್ಲಿ ಕಾವ್ಯ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಹಲವು ವರ್ಷಗಳ ಕಾಲ ಸಕ್ರಿಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕೆಲವು ಬಿಡಿ ಕವಿತೆ, ಕತೆ, ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಚೊಚ್ಚಲ ಕೃತಿ 'ಧಾವತಿ' ಕಾದಂಬರಿಯಾಗಿ 'ತಮಟೆ ಪುಸ್ತಕ' ಪ್ರಕಾಶನದಿಂದ ಪ್ರಕಟಗೊಂಡಿದೆ.