About the Author

ಡಿ. ಆರ್. ವೆಂಕಟರಮಣನ್ ಕನ್ನಡ ಸಾಹಿತ್ಯ ಲೋಕದ ಮಹಾನ್ ಆಚಾರ್ಯರಾದ ಡಿ.ವಿ.ಜಿ ಅವರಿಗೆ ಆಪ್ತರಾಗಿದ್ದವರು. ಡಿವಿಜಿ ಅವರ ಸಾಹಿತ್ಯ ಸ್ವಾದವನ್ನು ಲೋಕಕ್ಕೆ ನೀಡಿದ ಅವರ 'ಕಗ್ಗಕ್ಕೊಂದು ಕೈಪಿಡಿ' ಪ್ರಖ್ಯಾತ ಕೃತಿ. 

1931ರ ಫೆಬ್ರವರಿ 21ರಂದು ಕೊಳ್ಳೇಗಾಲದ ಬಳಿ ಇರುವ ಹನೂರು ಗ್ರಾಮದಲ್ಲಿ ಜನಿಸಿದರು. ತಂದೆ ರಾಮಚಂದ್ರ ಅಯ್ಯರ್ ಮೂಲತಃ ದಾರಾಪುರಂ ಎಂಬ ಸ್ಥಳಕ್ಕೆ ಸೇರಿದವರಾಗಿದ್ದು ಸರ್ಕಾರಿ ಕೆಲಸದ ನಿಮಿತ್ತ ಕರ್ನಾಟಕದಲ್ಲಿ ನೆಲೆಸಿದರು. ತಾಯಿ ಸುಬ್ಬಲಕ್ಷ್ಮಿ. ಇವರಿಗೆ ಇಬ್ಬರು ತಮ್ಮಂದಿರು.  ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪಡೆದ ಅವರು ಬಿ.ಎ. ಪದವಿಯನ್ನು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪಡೆದರು. ನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಗಳಿಸಿದರು. 

ವೆಂಕಟರಮಣನ್ 21ನೆಯ ವಯಸ್ಸಿಗೆ ಹೈದರಾಬಾದಿನ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. 1956ರಲ್ಲಿ ಕೇಂದ್ರ ಸರ್ಕಾರವು ಭಾಷಾವಾರು ಪ್ರಾಂತ್ಯಗಳನ್ನಾಗಿ ರಾಜ್ಯಗಳನ್ನು ವಿಂಗಡಿಸಿದಾಗ ಕನ್ನಡಿಗರೆಲ್ಲ ಬೆಂಗಳೂರಿಗೆ ಹೋಗಿ ಕೆಲಸ ಮಾಡುವ ಅವಕಾಶವನ್ನು ಕಲ್ಪಿಸಿತು. ಹೀಗೆ 1956ರಲ್ಲಿ ಸ್ನೇಹಿತರಾದ ಎಂ. ವಿ. ರಾಮ ಚೈತನ್ಯ ಅವರೊಡನೆ ಬೆಂಗಳೂರಿಗೆ ಬಂದು ನೆಲೆಸಿದರು. 

ಬೆಂಗಳೂರಿನ ಎನ್. ಆರ್. ಕಾಲೋನಿಯಲ್ಲಿ ಪ್ರೊ. ಕೆ. ಸಂಪತ್ ಗಿರಿರಾಯರ ಮನೆಯಲ್ಲಿ ವಾಸ ಮಾಡತೊಡಗಿದರು. ಈ ಮನೆಯ ಬಳಿಯಲ್ಲಿಯೇ ಡಿವಿಜಿಯವರು ಸ್ಥಾಪಿಸಿದ ಗೋಖಲೆ ಸಾರ್ವಜನಿಕ ಸಂಸ್ಥೆ ಇತ್ತು.  ಇಬ್ಬರು ಸ್ನೇಹಿತರೂ ದಿನವೂ ಸಂಸ್ಥೆಯ ವಾಚನಾಲಯ ಹಾಗೂ ಪುಸ್ತಕ ಭಂಡಾರಕ್ಕೆ ಹೋಗುತ್ತಿದ್ದರು. ತರುಣರನ್ನು ಗಮನಿಸಿದ ಪೂಜ್ಯ ಡಿವಿಜಿಯವರು ಈ ತರುಣರನ್ನು ತಾವೇ ಕರೆದು ಹೆಸರು, ಉದ್ಯೋಗ, ತಂದೆ-ತಾಯಿ ಮುಂತಾದ ವಿವರಗಳನ್ನು ವಿಚಾರಿಸಿದರು.  ಸಂಸ್ಥೆಗೆ ಸದಸ್ಯರಾಗಿ ಎಂದು ಹೇಳಿದರು. ಹೀಗೆ ವೆಂಕಟರಮಣನ್ ಅವರಿಗೆ ಡಿವಿಜಿಯವರ ಪರಿಚಯವಾಯಿತು. 

ವೆಂಕಟರಮಣನ್ ಅವರು ಸಂಸ್ಕೃತ, ತೆಲುಗು, ತಮಿಳು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿಯೂ  ಪಾಂಡಿತ್ಯವನ್ನು ಪಡೆದಿದ್ದರು. ಶೃಂಗೇರಿ ಜಗದ್ಗುರುಗಳ ಸಂಸ್ಕೃತ ಅನುಗ್ರಹ ಭಾಷಣಗಳ ಕನ್ನಡ ಅನುವಾದ 'ಉಪದೇಶ ಸುಧಾ'.  ಸಂಸ್ಕೃತ ಶ್ಲೋಕ ಮಾಲೆ 'ಕಮಲಜಯಿತಾಷ್ಟಕ'. ಇದಕ್ಕೆ ಕನ್ನಡದಲ್ಲಿ ವಿವರಣೆಯನ್ನು ನೀಡಿದ್ದಾರೆ. ಡಿವಿಜಿಯವರು ಇಂಗ್ಲೀಷಿನಲ್ಲಿ ಅದ್ವೈತ ತತ್ವದ ಬಗ್ಗೆ ಬರೆದಿದ್ದ ಇಂಗ್ಲೀಷ್ ಲೇಖನವನ್ನು 'ಅದ್ವೈತ ತತ್ವ ಮತ್ತು ಅನುಷ್ಠಾನ' ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ತೆಲುಗಿನ ಮಹಾಕವಿ 'ವೇಮನ'ನನ್ನು ಕುರಿತು ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ ಅವರು ತೆಲುಗಿನಲ್ಲಿ ಬರೆದಿರುವ ಲೇಖನಗಳನ್ನು

ವೆಂಕಟರಮಣನ್ ಕನ್ನಡಕ್ಕೆ ಅನುವಾದಿಸಿದ್ದಾರೆ.  ರೈಟ್ ಆನರಬಲ್ ಶ್ರೀ. ಶ್ರೀನಿವಾಸ ಶಾಸ್ತ್ರಿಗಳು ವಾಲ್ಮೀಕಿ ರಾಮಾಯಣವನ್ನು ಕುರಿತು ಇಂಗ್ಲೀಷಿನಲ್ಲಿ ಮಾಡಿದ ಭಾಷಣಗಳನ್ನು 'ರಾಮಾಯಣ ಉಪನ್ಯಾಸ ಮಂಜರಿ' ಎಂಬ ಹೆಸರಿನಲ್ಲಿ ಕನ್ನಡಿಸಿದ್ದಾರೆ. 'ಶ್ರೀ ವಿಷ್ಣು ಸಹಸ್ರನಾಮ ಅರ್ಥ ಸಹಿತ' ಎಂಬ ಪುಸ್ತಕದಲ್ಲಿ ನಾಮಗಳ ವಿವರಣೆಯನ್ನು ನೀಡಿದ್ದಾರೆ. ಸಿ. ರಾಜಗೋಪಾಲಚಾರಿ (ರಾಜಾಜಿ) ಅವರು ತಮಿಳಿನಲ್ಲಿ ಬರೆದ ಕ್ರೈಸ್ತ ವಿರಕ್ತ ಲಾರೆನ್ಸ್  ಅವರನ್ನು ಕುರಿತ  ಪುಸ್ತಕವನ್ನು ಕನ್ನಡಕ್ಕೆ 'ಸ್ನೇಹ ಯೋಗ' ಎಂಬ ಶೀರ್ಷಿಕೆಯಲ್ಲಿ ಅನುವಾದಿಸಿದ್ದಾರೆ. ತಮಿಳಿನಲ್ಲಿ ರಾಜಾಜಿಯವರು ಬರೆದಿರುವ  ಮಾರ್ಕಸ್ ಅರಿಲಿಯಸ್ಸನ   ಚಿಂತನೆಗಳನ್ನು ಕನ್ನಡಕ್ಕೆ 'ಆತ್ಮಚಿಂತನೆ' ಎಂದು ಅನುವಾದಿಸಿದ್ದಾರೆ. ಇದಲ್ಲದೇ ಕನ್ನಡದ ನಿಯತಕಾಲಿಕೆಗಳಲ್ಲಿ ಹಲವಾರು ಲೇಖನಗಳು ಪ್ರಕಟವಾಗಿವೆ.

 

ಡಿ. ಆರ್. ವೆಂಕಟರಮಣನ್