ತಾರಿಣಿ ಅವರು ಜನಿಸಿದ್ದು 1945ರ ಫೆಬ್ರುವರಿ 6ರಂದು. ತಂದೆ ಕೆ.ವಿ. ಪುಟ್ಟಪ್ಪ. ತಾಯಿ ಹೇಮಾವತಿ. ಕುವೆಂಪು ಅವರ ದ್ವಿತೀಯ ಪುತ್ರಿಯಾದ ತಾರಣಿ ಅವರನ್ನು ಕುರಿತು ಪುಟ್ಟಪ್ಪನವರು ’ದೊಡ್ಡವರೆಲ್ಲರ ಹೃದಯದಿ ಕಟ್ಟಿಹ ತೊಟ್ಟಿಲ ಲೋಕದಲಿ ನಿತ್ಯ ಕಿಶೋರತೆ ನಿದ್ರಿಸುತಿರುವುದು ವಿಸ್ಮೃತಿನಾಕದಲಿ: ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯ ಶಿಶು; ಹಾಡಲಿ; ಕುಣಿಯಲಿ; ಏರಲಿ ದಿವಿಜತ್ವಕೆ ಈ ಮನುಜ ಪಶು’ ಎಂದು ಕವಿತೆ ರಚಿಸಿದ್ದರು.
ತಾರಿಣಿ ಅವರ ವಿವಾಹವು 1973ರ ಮೇ 17ರಂದು ಚೊಕ್ಕಾಡಿಯ ಕೊಳಂಬೆ ಪುಟ್ಟಣ್ಣಗೌಡರ ಪುತ್ರ ಚಿದಾನಂದ ಅವರ ಜೊತೆ ನಡೆಯಿತು. ತಾರಿಣಿ ಅವರು ತಮ್ಮ ತಂದೆಯ ಜೊತೆಗಿನ ಒಡನಾಟ ಕುರಿತು ಪುಸ್ತಕ ರಚಿಸಿದ್ದಾರೆ. ತಾರಿಣಿ ಅವರ ಸಹೋದರ ತೇಜಸ್ವಿ ಅವರ ’ಅಣ್ಣನ ನೆನಪು’ ಪುಸ್ತಕಕ್ಕಿಂತ ಭಿನ್ನ ನೋಟವನ್ನು ಈ ಕೃತಿ ಒದಗಿಸುತ್ತದೆ.