ಬಿ.ಪಿ. ರಾಧಾಕೃಷ್ಣ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಬಿ.ಪುಟ್ಟಯ್ಯ, ತಾಯಿ ವೆಂಕಮ್ಮ. ರಾಧಾಕೃಷ್ಣರ ವಿದ್ಯಾಭ್ಯಾಸವೆಲ್ಲ ನಡೆದಿದ್ದು ಬೆಂಗಳೂರಿನಲ್ಲಿ. ಸೆಂಟ್ರಲ್ ಕಾಲೇಜಿನಿಂದ ಭೂವಿಜ್ಞಾನದ ಪದವಿ (ಬಿ.ಎಸ್ಸಿ.ಆನರ್ಸ್) 1937ರಲ್ಲಿ ಪಡೆದು, ಮೈಸೂರು ಸಂಸ್ಥಾನದ ಭೂವಿಜ್ಞಾನ ಇಲಾಖೆಗೆ ಕ್ಷೇತ್ರ ಸಹಾಯಕರಾಗಿ ಸೇರಿ, ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ನಿರ್ದೇಶಕರಾಗಿ ನಿವೃತ್ತರಾದರು.
ರಾಮನಗರದ ಕಲ್ಲುಬಂಡೆಗಳ ಬಗ್ಗೆ ವಿಶೇಷಾಧ್ಯಯನ ಕೈಗೊಂಡು ಪ್ರಬಂಧ ಮಂಡಿಸಿ, ಮೈಸೂರು ವಿಶ್ವವಿದ್ಯಾಲಯದಿಂದ 1954ರಲ್ಲಿ ಡಾಕ್ಟರೇಟ್ ಪಡೆದರು. ನೇರನುಡಿಯ, ನಿಷ್ಠುರ ವರ್ತನೆಯ, ಸಮಯ ಪ್ರಜ್ಞೆಯ ಖಂಡಿತವಾದಿಯಾಗಿದ್ದರು. ಕರ್ನಾಟಕದ ಶಿಲೆಗಳ ಬಗ್ಗೆ ವಿಶೇಷಾಧ್ಯಯನ ಮಾಡಿದಂತೆ ಭೂಮಿಯ ಒಡಲಲ್ಲಿರುವ ಖನಿಜ ನಿಕ್ಷೇಪವನ್ನು ಗುರುತಿಸಿ, ಕರ್ನಾಟಕದ ಅಭ್ಯುದಯಕ್ಕೆ ಬಳಸಿಕೊಳ್ಳುವಂತಹ ಯೋಜನೆಗಳನ್ನು ಸಿದ್ಧಪಡಿಸಿಕೊಟ್ಟರು. ಜಲಸಂಪನ್ಮೂಲಗಳನ್ನು ಬಳಸಿಕೊಳ್ಳುವಲ್ಲಿಯೂ ವಿಶೇಷ ಕಾರ್ಯವನ್ನು ಕೈಗೊಂಡು ಅತ್ಯಂತ ಕಡಿಮೆ ಖರ್ಚಿನಲ್ಲಿ ಗ್ರಾಮೀಣ ಜನರಿಗೆ ಕುಡಿಯುವ ನೀರೊದಗಿಸಲು ಯೋಜನೆ ರೂಪಿಸಿದಾಗ, ಅಂದಿನ ಗ್ರಾಮೀಣಾಭಿವೃದ್ಧಿ ಮಂತ್ರಿ ನಜೀರ್ ಸಾಬ್ ಅವರು ಕಾರ್ಯಗತಗೊಳಿಸಿದರು. ಜಲ ಹಾಗೂ ಖನಿಜಕ್ಕೆ ಸಂಬಂಧಿಸಿದಂತೆ ನೂರಾರು ಲೇಖನಗಳನ್ನು ಕಾಲಕಾಲಕ್ಕೆ ಬರೆದಿದ್ದು ಅವೆಲ್ಲವೂ ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡು ದೇಶ – ವಿದೇಶಗಳ ವಿಜ್ಞಾನಿಗಳ ಗಮನ ಸೆಳೆದಿದ್ದರು. ಭಾರತೀಯ ಭೂ ವಿಜ್ಞಾನಿಗಳ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ದುಡಿದರಲ್ಲದೆ ‘ಜರ್ನಲ್ ಆಫ್ ಬಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ’ ಪತ್ರಿಕೆಯ ಸಂಪಾದಕರಾಗಿಯೂ ದುಡಿದರು. ಭೂ ವಿಜ್ಞಾನಿಯಾಗಿ ಮಾತ್ರವಲ್ಲದೆ, ಲೇಖಕರಾಗಿಯೂ ರಾಧಾಕೃಷ್ಣರವರ ಕೊಡುಗೆ ಅಪಾರ. ಸಾಹಿತ್ಯದಲ್ಲಿ ಆಸಕ್ತಿ ಬೆಳೆದುದು ಇವರ ತಂದೆ ಬಿ. ಪುಟ್ಟಯ್ಯನವರಿಂದ. ಬಿ.ಎಂ.ಶ್ರೀ ಯವರ ಒಡನಾಡಿಯಾದ ಪುಟ್ಟಯ್ಯನವರು ಇಂಗ್ಲೆಂಡಿಗೆ ತೆರಳಿ ಮುದ್ರಣ ಕಲೆಯಲ್ಲಿ ಪರಿಣತಿ ಪಡೆದು, ತಮ್ಮ ಅನುಭವವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಚ್ಚುಕೂಟ ಸ್ಥಾಪಿಸುವಲ್ಲಿ ನೆರವಾಗಿ, ಮೇಲ್ವಿಚಾರಕರಾಗಿಯೂ ಕಾರ್ಯನಿರ್ವಹಿಸಿದರು. ಇವರ ತಾಯಿಯು ದಾಸರ ಪದಗಳನ್ನು ಹಾಡುತ್ತಿದ್ದರು. ಬಂಕಿಂಚಂದ್ರರ ಕಾದಂಬರಿಗಳ ಅನುವಾದವನ್ನು ಬಿ.ವೆಂಕಟಾಚಾರ್ಯರು ಮಾಡಿದ್ದು, ಸೋದರತ್ತೆಯು ಪ್ರತಿ ಶನಿವಾರ ಅದನ್ನು ಹಜಾರದಲ್ಲಿ ಎಲ್ಲರ ಸಮ್ಮುಖದಲ್ಲಿ ಓದುತ್ತಿದ್ದರು. ಹೀಗೆ ವಿವಿಧ ಕಾದಂಭರಿಗಳ ಪರಿಚಯವೂ ರಾಧಾಕೃಷ್ಣರಿಗೆ ಆಗಿತ್ತು.
‘ಡಾ. ಸಿ.ವಿ. ರಾಮನ್’, ‘ರಾಮಾನುಜಂ’ ‘ಬಿ.ಜಿ.ಎಲ್.ಸ್ವಾಮಿ’, ‘ಡಾರ್ವಿನ್’ ‘ಸಾರ್ಥಕ ಬದಕು’ (ವಿ.ಸೀ. ಯವರ ಜೀವನ, ಸಾಹಿತ್ಯ ಮತ್ತು ಸಾಧನೆ) ಮುಂತಾದವರ ಬಗ್ಗೆ ಕೃತಿ ರಚಿಸಿದ್ದಲ್ಲದೆ ಅಂತರ್ಜಲ (ಇತರರೊಡನೆ) ಮತ್ತು ಲೋಹವಿದ್ಯೆ ಎಂಬ ಗ್ರಂಥಗಳನ್ನು ಪ್ರಕಟಿಸಿದ್ದಾರೆ.
ಇವರ ಮಹತ್ಮಿವದ ಕೃತಿಗಳೆಂದರೆ-ಮಿನರಲ್ ರಿಸೋರ್ಸಸ್ ಆಫ್ ಕರ್ನಾಟಕ (ಇಂಗ್ಲಿಷಿನಲ್ಲಿ) ಹಾಗೂ ತಂದೆ ಬಿ. ಪುಟ್ಟಯ್ಯ ಕುರಿತು ಬರೆದ (1946) ಗ್ರಂಥ ‘ನನ್ನ ತಂದೆ’. ಇದಕ್ಕೆ ಡಿ.ವಿ.ಜಿ. ಅವರು ದೀರ್ಘ ಮುನ್ನುಡಿ ಬರೆದಿದ್ದಾರೆ. ರಾಧಾಕೃಷ್ಣರಿಗೆ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (1974), ಭಾರತ ಸರಕಾರದ ‘ಪದ್ಮಶ್ರೀ’ (1991) ಮತ್ತು ಇಂಡಿಯನ್ ಸ್ಕೂಲ್ ಆಫ್ ಮೈನ್ಸ್ನಿಂದ ಡಾಕ್ಟರ್ ಆಫ್ ಸೈನ್ಸ್ ಪದವಿ (1992) ನೀಡಿ ಗೌರವಿಸಿದೆ. ಸಾಹಿತ್ಯ ಸೇವೆಗಾಗಿ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ವಿಶ್ವ ಮಾನವ ಪ್ರಶಸ್ತಿ, ಡಾ.ಸಿ.ವಿ. ರಾಮನ್ ಮತ್ತು ಡಾರ್ವಿನ್ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಎರಡು ಬಾರಿ ಪುರಸ್ಕೃತರಾಗಿದ್ದಾರೆ.