ಎಡಪಂಥೀಯ ಕಾರ್ಮಿಕ ಸಂಘಟನೆ ಮತ್ತು ಎಡಪಂಥೀಯ ರಾಜಕೀಯ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅದಮಾರು ಶ್ರೀಪತಿ ಆಚಾರ್ಯ ಅವರು ಮೂಲತಃ ಉಡುಪಿಯವರು.
ಮೂರು ದಶಕಗಳಿಗೂ ಹೆಚ್ಚು ಕಾಲ LIC ಉಡುಪಿ ಮತ್ತು ಬೆಂಗಳೂರು ವಿಭಾಗಗಳಲ್ಲಿಅಲ್ಲಿನ ಕಾರ್ಮಿಕ ಸಂಘಟನೆಯಾದ ಅಖಿಲ ಭಾರತ ವಿಮಾ ನೌಕರರ ಸಂಘದಲ್ಲಿ ವಿಭಾಗೀಯ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದಾರೆ.
1943ರ ಮಾರ್ಚ್ 15ರಂದು ಜನಿಸಿದ ಆಚಾರ್ಯರು ಇಂಗ್ಲಿಷ್ ಎಂ.ಎ ಪದವೀಧರರು. ಭಾರತೀಯ ಜೀವ ವಿಮಾ ನಿಗಮದಲ್ಲಿ ಮೂವತ್ತೆಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ’ಜನವಾಹಿನಿ’ ದೈನಿಕದಲ್ಲಿ ಅಂಕಣಕಾರರಾಗಿ, ಐಕ್ಯರಂಗ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯನಾಗಿ ಮತ್ತು ಜನಶಕ್ತಿ ಪತ್ರಿಕೆಯಲ್ಲಿ ಅಂಕಣಕಾರರಾಗಿ ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ.
ಇವರ ಕೆಲವು ಸಣ್ಣ ಕತೆಗಳೂ ಸಹ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ. ಲೆನಿನ್ ಅವರ ಮಾರ್ಕ್ಸ್ವಾದದ ಬಗ್ಗೆ, ಎಂಗೆಲ್ಸ್ ಅವರ ಸಮಾಜವಾದ ವೈಜ್ಞಾನಿಕ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಖಗೇಶ್ ದೇವ್ ಬರ್ಮನ್ ಅವರು ಬರೆದಿದ್ದ ’ಎಸ್.ಡಿ ಬರ್ಮನ್ ಸಂಗೀತ ಪ್ರಪಂಚ’ ವೆಂಬ ಪುಸ್ತಕವನ್ನು ಕನ್ನಡೀಕರಿಸಿದ್ದಾರೆ. ಇವರ ಇತ್ತೀಚಿನ ಪ್ರಕಟಣೆಯಾದ ಕಾರ್ಲ್ಮಾರ್ಕ್ಸ್ ಅವರ ಕ್ಯಾಪಿಟಲ್ ಗ್ರಂಥದ ಮೊದಲ ಸಂಪುಟದ ಕನ್ನಡ ಅನುವಾದದಲ್ಲಿ ಹಲವು ಲೇಖಕರ ಜೊತೆ ಇವರೂ ಇದ್ದಾರೆ.
ಸಾಹಿತ್ಯ, ಕಲೆ, ಮತ್ತು ಕ್ರೀಡೆಗಳ ಬಗ್ಗೆ ಅಪಾರ ಆಸಕ್ತಿ ತಳೆದ ಅದಮಾರು ಶ್ರೀಪತಿ ಆಚಾರ್ಯರಿಗೆ ತೋಟಗಾರಿಕೆ ಮತ್ತು ಪಕ್ಷಿವೀಕ್ಷಣೆಯೂ ಕೂಡ ಅಚ್ಚುಮೆಚ್ಚಿನ ಹವ್ಯಾಸವಾಗಿದೆ.