ಕವಿ ಎ.ಕೆ ಹಂಪಣ್ಣ ಅವರು ಸಮಾಜಸೇವೆ, ಸಂಘಟನೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದವರು. ಚಿತ್ರದುರ್ಗ ಜಿಲ್ಲೆಯ ಮಾಡನಾಯಕನಹಳ್ಳಿಯವರಾದ ಹಂಪಣ್ಣ ಅವರು ಹುಟ್ಟಿದ್ದು 1953 ರ ಜೂನ್ 20 ರಂದು. ತಂದೆ ಎ.ಕೆ.ಮಾರಪ್ಪ, ತಾಯಿ-ಶಾಂತಮ್ಮ. ಬಡಕುಟುಂಬದಲ್ಲಿ ಹುಟ್ಟಿದ ಹಂಪಣ್ಣ ಬಾಲ್ಯದಿಂದಲೂ ಅಕ್ಷರ ವ್ಯಾಮೋಹಿ. ಹುಟ್ಟೂರಿನಲ್ಲಿ ಆರಂಭಿಕ ಶಿಕ್ಷಣ, ಚಿತ್ರದುರ್ಗದಲ್ಲಿ ಪ್ರೌಢಶಾಲೆ, ಪಿಯುಸಿ ಮತ್ತು ಪದವಿ ವ್ಯಾಸಂಗ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
ಅಧ್ಯಯನ, ಅಧ್ಯಾಪನ, ಬರವಣಿಗೆ, ಸಂಘಟನೆ ಪ್ರಮುಖ ಆಸಕ್ತಿಯ ಕ್ಷೇತ್ರಗಳು. ಕೋಲಾರ ಸರ್ಕಾರಿ ಕಾಲೇಜಿನ ಕನ್ನಡ ಅಧ್ಯಾಪಕನಾಗಿ ವೃತ್ತಿ ಬದುಕನ್ನು ಆರಂಭಿಸಿದ ಅವರು ಬೀದರ್ ಹುಮನಾಬಾದ್, ತುಮಕೂರು ಜಿಲ್ಲೆಯ ಗುಬ್ಬಿ, ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿ , ಮೈಸೂರು ಸೇರಿದಂತೆ ಹಲವೆಡೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ರಚನೆಯಲ್ಲಿ ಕಾವ್ಯವೇ ಏಕೈಕ ಆಯ್ಕೆ ಎನ್ನುವ ಹಂಪಣ್ಣ ಅವರು ‘ದನಿಗಳು’ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶ ಪಡೆದವರು. ಆನಂತರ ನಾಲ್ಕು ಕವನ ಸಂಕಲನಗಳು, ಎರಡು ಜೀವನಚರಿತ್ರೆ, ಒಂದು ವಾಚಿಕೆಗಳ ಸಂಗ್ರಹ, ಮತ್ತಿತರ ಕೃತಿಗಳನ್ನು ರಚಿಸಿದ್ದಾರೆ. ಮೈಸೂರು ದಸರಾ ಕವಿಗೋಷ್ಠಿ ಆಯ್ಕೆ ಸಮಿತಿ, ಮೈಸೂರು ವಿವಿ ಕನ್ನಡ ಪಠ್ಯಪುಸ್ತಕ ಮಂಡಳಿ, ಬೆಂಗಳೂರು ವಿವಿಯ ಕನ್ನಡ ಪಠ್ಯಪುಸ್ತಕ ಮಂಡಳಿ, ಹಂಪಿ ಕನ್ನಡ ವಿವಿಯ ಸಿಂಡಿಕೇಟ್ ಸದಸ್ಯರಾಗಿ, ಸಾರ್ವಜನಿಕ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ್ದಾರೆ. ಅಧ್ಯಾಪಕ ಸಂಘದ ಕಾರ್ಯದರ್ಶಿ, ತುಮಕೂರು ಜಿಲ್ಲಾ ಸಾಕ್ಷರ ಸಮಿತಿ ಸಂಚಾಲಕ, ಕನ್ನಡನಾಡು ಸಾಕ್ಷರನಾಡು ಸಮಿತಿಯ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ, ವಿದ್ಯಾರ್ಥಿ ಕ್ಷೇಮಪಾಲಕ, ಮಾತಂಗ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಕಾಗಿ ಬಹುಸ್ತರದ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದವರು ಹಂಪಣ್ಣ. ಮೈಸೂರು ದಸರಾ ಕವಿಗೋಷ್ಠಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ದಲಿತ ಚಳುವಳಿ ಮತ್ತು ಸಂವೇದನೆ ಕವಿಗೋಷ್ಠಿಯಲ್ಲಿ ಕವಿ, ಅಧ್ಯಕ್ಷನಾಗಿ ಭಾಗಿಯಾಗಿದ್ದರು.
2019 ಜೂನ್ 15ರಂದು ದಾವಣೆಗೆರೆಯಲ್ಲಿ ನಿಧನರಾದರು.