ಜನಸಾಮಾನ್ಯರಿಗಷ್ಟೇ ಅಲ್ಲ; ಪತ್ರಕರ್ತರಿಗೂ ಪಠ್ಯದಂತೆ ಇಲ್ಲಿನ ಬರಹಗಳು ರೂಪುಗೊಂಡಿವೆ..


"ಕಾಡಿಗೆ ನಾವು ಮನುಷ್ಯರಾಗಿ ಹೋಗಬಾರದು. ನಾವು ಕೂಡ ಒಂದು ಪ್ರಾಣಿಯಾಗಿರಬೇಕು. ಯಾವ ಪ್ರಾಣಿ, ಪಕ್ಷಿಯನ್ನು ವೀಕ್ಷಿಸಲು ಹೋಗುತ್ತೇವೆಯೋ ಅದರ ಸ್ವಭಾವವನ್ನೇ ನಾವು ರೂಢಿಸಿಕೊಳ್ಳಬೇಕು' ಎಂಬಂಥ ಮಾತುಗಳು ಅರ್ಥಪೂರ್ಣವಾಗಿವೆ," ಎನ್ನುತ್ತಾರೆ ವಿಶ್ವೇಶ್ವರ ಭಟ್. ಅವರು ಐತಿಚಂಡ ರಮೇಶ್ ಉತ್ತಪ್ಪ ನವರ ‘ಕಾಡು ಹೇಳಿದ ಕಥೆಗಳು’ ಕೃತಿಯ ಕುರಿತು ಬರೆದ ನುಡಿ ಮಾತುಗಳು.

ಸಂಪಾದಕ ಮಿತ್ರ ಐತಿಚಂಡ ರಮೇಶ್ ಉತ್ತಪ್ಪ, ಕಾಡು ಹಾಗೂ ವನ್ಯಜೀವಿಗಳ ಅಪ್ಪಟ ಪರಿಸರ ಪ್ರೇಮಿ. ಇವರ ಹುಟ್ಟು, ಊರು, ಬಾಲ್ಯದ ಪರಿಸರವೇ ನಿಸರ್ಗ ತಾಣ. ಹಾಗಾಗಿ ಬೆಟ್ಟಗುಡ್ಡ, ಕಾಡುಮೇಡು ನೋಡುತ್ತಲೇ ಬೆಳೆದವರು. ಸಹಜವಾಗಿ 'ಕಾಡು ಹೇಳಿದ ಕಥೆಗಳು' ಇವರ ಭಾವ, ಭಾಷೆಗೆ ಒಗ್ಗಿವೆ. ತಮ್ಮ ಕ್ರಿಯಾಶೀಲತೆಯ ಎರಕ ಹೊಯ್ದು ಕಾಡಿನ ಪರಿಸರ ಹಾಗೂ ವನ್ಯಜೀವಿ ಕಥೆಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಈ ಪುಸ್ತಕದ ಉದ್ದಕ್ಕೂ ಕಥೆಯ ಸೃಷ್ಟಿ ಹಾಗೂ ಸೃಜನಶೀಲತೆ ಎದ್ದು ಕಾಣುತ್ತದೆ. ಅಭಿಮಾನದ ಸಂಗತಿ ಜತೆಗೆ ಆಕಾಶವಾಣಿಗಾಗಿ ಇವರು ರೂಪಿಸಿದ ಸರಣಿ ಕಾರ್ಯಕ್ರಮಗಳು ಜನಪ್ರಿಯಗೊಂಡಿವೆ. ಪತ್ರಕರ್ತ, ಕಲಾವಿದ, ಬರಹಗಾರ-ಹೀಗೆ ಇವರ ಬಹುಮುಖ ಪ್ರತಿಭೆ ಅನನ್ಯ.

ಲೇಖಕರ ಮಾತುಗಳಲ್ಲಿ 'ಮನುಷ್ಯರ ಬಗ್ಗೆ ಬರೆಯುವುದಕ್ಕಿಂತ ಪ್ರಾಣಿಗಳ ಕುರಿತು ಬರೆಯುವುದೇ ನನಗೆ ಹೆಚ್ಚು ಇಷ್ಟ' ಎಂಬ ಸಾಲು ನನ್ನ ಮನಸ್ಸನ್ನು ಆವರಿಸಿತು. ಮೊದಲಿಗೆ 'ಪತ್ರಕರ್ತನ ಕಣ್ಣಲ್ಲಿ ಕಾಡಿನ ಕಥೆಗಳು' ಎಂಬ ಸುದೀರ್ಘ ಲೇಖನ ಓದುತ್ತಾ ಹೋದೆ. 'ಕಾಡಿಗೆ ನಾವು ಮನುಷ್ಯರಾಗಿ ಹೋಗಬಾರದು. ನಾವು ಕೂಡ ಒಂದು ಪ್ರಾಣಿಯಾಗಿರಬೇಕು. ಯಾವ ಪ್ರಾಣಿ, ಪಕ್ಷಿಯನ್ನು ವೀಕ್ಷಿಸಲು ಹೋಗುತ್ತೇವೆಯೋ ಅದರ ಸ್ವಭಾವವನ್ನೇ ನಾವು ರೂಢಿಸಿಕೊಳ್ಳಬೇಕು' ಎಂಬಂಥ ಮಾತುಗಳು ಅರ್ಥಪೂರ್ಣವಾಗಿವೆ.

ಒಬ್ಬ ಪತ್ರಕರ್ತನಿಗೆ ಇರಬೇಕಾದ ವೃತ್ತಿಕೌಶಲ್ಯತೆಯನ್ನು ಇಲ್ಲಿನ ಲೇಖನಗಳು ತಿಳಿಸಿಕೊಡುತ್ತವೆ. ತಮ್ಮ ವೈಲ್ಡ್ ಲೈಫ್ ರಿಪೋರ್ಟಿಂಗ್‌ನಲ್ಲಿ ವನ್ಯಜೀವಿ ಹಾಗೂ ಪರಿಸರ ಕುರಿತ ಬರಹದಲ್ಲಿ ಉತ್ತಮ ವರದಿಯ ಕಲೆಗಾರಿಕೆ ಇದೆ. 'ಗ್ರೀನ್ ಪೆನ್ ರೈಟ- ‌ರ್' ಯಾವಾಗಲೂ ಕಾಡು ಮತ್ತು ವನ್ಯಜೀವಿಗಳ ಮಹತ್ವ ಬಿಂಬಿಸುತ್ತಾನೆ ಎಂಬುದು ಇಲ್ಲಿ ಸಾಬೀತುಗೊಂಡಿದೆ. ಜನಸಾಮಾನ್ಯರಿಗಷ್ಟೇ ಅಲ್ಲ; ಪತ್ರಕರ್ತರಿಗೂ ಪಠ್ಯದಂತೆ ಇಲ್ಲಿನ ಬರಹಗಳು ರೂಪುಗೊಂಡಿವೆ. ಇವರ ಸರಳ ಭಾಷೆ ಕುತೂಹಲಿತವಾಗಿ ಓದಿಸಿಕೊಳ್ಳುತ್ತದೆ.

ಪ್ರೀತಿಯೇ ಪ್ರಾಣಿಗಳ ಭಾಷೆ. ಈ ಮೂಲಕ ಅರ್ಥ ಮಾಡಿಕೊಳ್ಳುವ ಸ್ವಭಾವ ಇರುತ್ತವೆ. ಅವು ಕೂಡ ಅಳುತ್ತವೆ, ನಗುತ್ತವೆ, ಪ್ರೀತಿಗೆ ಹಂಬಲಿಸುತ್ತವೆ. ನಾವು ತೋರುವ ಪ್ರೀತಿಯ ಆಧಾರದ ಮೇಲೆ ಅವು ನಮ್ಮ ಜೊತೆ ಬೆರೆಯುತ್ತವೆ. ಅಂಥ ಪ್ರಾಣಿಗಳ ಗುಣ ಸ್ವಭಾವವನ್ನು ನಾವು ರೂಢಿಸಿಕೊಳ್ಳುವ ಅಗತ್ಯವಿದೆ. ಡ್ರಮ್ ಬಾರಿಸಿದಾಗ ರಾಷ್ಟ್ರಗೀತೆಯ ಚರಣದ ಸದ್ದು ಕೇಳುತ್ತಿದ್ದಂತೆ ಅಂಬಾರಿ ಹೊರುವ ಅಭಿಮನ್ಯು ಸೊಂಡಿಲೆತ್ತಿ ನಮಿಸುತ್ತಾನೆ. ಅಂದರೆ ಆನೆಯ ಗ್ರಹಣಶಕ್ತಿ ಎಷ್ಟಿದೆ ಯೋಚಿಸಿ. ಹಾಗೆಯೇ ಆನೆಯಂಥ ಪ್ರಾಣಿ 26 ವರ್ಷಗಳಿಂದ ರಾಷ್ಟ್ರಗೀತೆಗೆ ನಮಿಸುವುದನ್ನು ಅಭ್ಯಾಸ ಮಾಡಿಕೊಂಡಿರುವುದು ಸಾಮಾನ್ಯ ಸಂಗತಿ ಅಲ್ಲ. ಇನ್ನು ವಿವೇಕ, ವಿವೇಚನೆ ಇರುವ ನಮಗೆ ಏನಾಗಿದೆ? ಪರಿಸರದ ನಾಶಕ್ಕೆ ನಾವೇಕೆ ಮುಂದಾಗುತ್ತಿದ್ದೇವೆ ಎಂಬ ಪ್ರಶ್ನೆ ಕೇಳಿಕೊಳ್ಳುವಂತಿದೆ.

'ನಾನು ಆನೆಗಳ ಕನವರಿಕೆಯಲ್ಲೇ ಇದ್ದೆ. ರಾತ್ರಿ ಕೂಡ ಕನಸ್ಸಿನಲ್ಲಿ ಆನೆಗಳೇ ಬರುತ್ತಿದ್ದವು. ಅವುಗಳ ಕುರಿತೇ ಯೋಚಿಸುತ್ತಿದ್ದೆ. ಪರಿಸರ ಪ್ರಿಯರು, ಪ್ರಾಣಿ ಪ್ರಿಯರೊಂದಿಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದೆ. ದುಬಾರೆ, ಮತ್ತಿಗೋಡು ಶಿಬಿರಗಳಿಗೆ ಆನೆಗಳನ್ನು ಹುಡುಕಿಕೊಂಡು ಹೋಗುತ್ತಿದ್ದೆ. ಹಾಗಾಗಿ ದಸರಾ ಬಂದರೆ ಅದು ನನಗೆ ಬಹುದೊಡ್ಡ ಹಬ್ಬ' ಎನ್ನುವ ರಮೇಶ್ ಉತ್ತಪ್ಪರ ಮಾತು ವೃತ್ತಿನಿರತ ಪತ್ರಕರ್ತನ ಅರ್ಪಣಾ ಭಾವವನ್ನು ಸೂಚಿಸುತ್ತದೆ.

ಲಕ್ಷ್ಮೀ-ಅಶ್ವತ್ಥಾಮನ ಲವ್ ಸ್ಟೋರಿ ಕುತೂಹಲಕಾರಿಯಾಗಿದೆ. ಪ್ರೇಮದ ಪ್ರತಿಫಲ ಎಂಬಂತೆ ಮರಿ ಆನೆ ಜನಿಸಿದ್ದು ಎಲ್ಲರಿಗೂ ಉಂಟು ಮಾಡಿದ ಸೋಜಿಗ. ಸಾಮಾನ್ಯವಾಗಿ ಗಂಡು ಹುಲಿ ಹೆಣ್ಣಿನ ಜೊತೆ ಮಿಲನ, ಮರಿಗಳ ನಂತರ ಸಾಕುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತದೆ. ಆದರೆ ಇಲ್ಲೊಂದು ಗಂಡು ಹುಲಿ ಜಲಿಮ್, ಹೆಂಡತಿ ಸತ್ತ ಬಳಿಕ ತನ್ನ ಮರಿಗಳನ್ನು ಸಾಕುವ ಪ್ರಸಂಗ ಮನಮಿಡಿಯುತ್ತದೆ. ಇದು ಮನುಷ್ಯರಿಗೂ ಮಾದರಿಯಾಗಿ ನಿಲ್ಲುತ್ತದೆ. ಆದರೆ 15 ವರ್ಷಕ್ಕೆ ತೀವ್ರ ಗಾಯದಿಂದ ಮೃತಪಟ್ಟಿದ್ದು ಮಾತ್ರ ಶೋಚನೀಯ.

ಮರಗಳು ಸದ್ದು ಮಾಡುವ ಮೂಲಕ ಮಾತಾಡುತ್ತವೆ. ಪ್ರಕೃತಿಯ ವೈಪರೀತ್ಯದ ಮಾಹಿತಿ ನೀಡುತ್ತವೆ ಎಂಬುದೇ ರೋಚಕ ಹಾಗೂ ಅಧ್ಯಯನ ಯೋಗ್ಯ ವಿಚಾರ. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಸಜ್ಜಾಗಿ 'ಸೌಂಡ್ ಟ್ರ್ಯಾಕ್' ಮೂಲಕ ಮರಗಳ ಮಾತಿನ ಸದ್ದನ್ನು ದಾಖಲು ಮಾಡಿರುವುದು ಹೊಸ ಬೆಳವಣಿಗೆ. ಮರ ಕಡಿಯುವಾಗ ತನ್ನ ನೋವಿನ ಭಾವನೆಯನ್ನು ಮೈಕ್ರೋಫೋನ್ ಮೂಲಕ ಪತ್ತೆ ಹಚ್ಚುವುದು ಸಹ ಹೊಸ ರೀತಿಯ ಸಂಶೋಧನೆಯಾಗಿದೆ.

ಕರ್ನಾಟಕಕ್ಕೆ ಸಾವಿರಾರು ಕಿಲೋ ಮೀಟರ್ ದೂರದಿಂದ ವಿವಿಧ ರೀತಿಯ ವಿದೇಶಿ ಪಕ್ಷಿಗಳು ಬರುತ್ತಿದ್ದವು. ಆದರೆ ಈಗಿನ ಹವಾಮಾನ ವೈಪರೀತ್ಯದಿಂದ ಪಕ್ಷಿಗಳು ವಲಸೆ ಬರುವುದು ಕಡಿಮೆಯಾಗಿದೆ. ಏರ್‌ಪೋರ್ಟ್‌ಗೆ ವಿಮಾನ ಹತ್ತಿರ ಬಂದು ಪ್ರತಿಕೂಲ ಹವಾಮಾನ ಇದೆ ಎಂಬ ತಂತ್ರಜ್ಞಾನ ಮಾಹಿತಿಯಿಂದ ಇಳಿಯುವುದಿಲ್ಲ. ಆಗ ವಿಮಾನ ಬೇರೊಂದು ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗುತ್ತದೆ. ಆದರೆ ಪಕ್ಷಿಗಳು ಸಾವಿರಾರು ಕಿಲೋ ಮೀಟರ್ ದೂರದಿಂದಲೇ ಹವಾಮಾನ ಬದಲಾವಣೆ ಊಹಿಸುತ್ತವೆ ಎಂಬುದು ನಿಜಕ್ಕೂ ಗ್ರೇಟ್. ಇಲ್ಲಿನ ಕಾಡು ಹಾಗೂ ವನ್ಯಜೀವಿಗಳ ವರದಿಗಾರಿಕೆಯನ್ನು ತಾಳ್ಮೆ ಮತ್ತು ಸೂಕ್ಷ್ಮ ಒಳನೋಟದಿಂದ ಮಾಡಲಾಗಿದೆ. ಒಳಗಣ್ಣಿನ ಬೆಳಕಿನಿಂದ ಪರಿಣಾಮಕಾರಿಯಾಗಿ ಲೇಖಕರು ಚಿತ್ರಿಸಿದ್ದಾರೆ. ಬೀದಿ ನಾಯಿಗಳ ಜೊತೆ ನಡೆದುಕೊಳ್ಳುವ ರೀತಿ ಗಮನ ಸೆಳೆಯುತ್ತದೆ. ಆನೆ, ಹುಲಿ, ಚಿರತೆ, ಜಿಂಕೆ, ಕಾಡೆಮ್ಮೆ, ಪಕ್ಷಿ, ಪತಂಗಗಳು, ಜಲಚರಗಳು, ಮಾತಾಡುವ ಮರ, ದೇವರ ಕಾಡು ವಿಚಾರಗಳು ಚಿಂತನೆಗೆ ಹಚ್ಚುವುದಲ್ಲದೆ, ವೃತ್ತಿಪರ ಕಸುಬಿನ ಕಾಡುವ ಕಥೆಗಳಾಗಿ ಮೂಡಿ ಬಂದಿವೆ.

ಪ್ರಕೃತಿ ವಿಕೋಪದಿಂದ ಆಗುವ ಅನಾಹುತ, ಪ್ರಾಣಿ-ಪಕ್ಷಿಗಳ ಮೇಲೂ ಕೊರಾನ ತಂದ ಆಪತ್ತು, ಕಾಡಿನಲ್ಲೂ ನೀರಿನ ಅಭಾವ, ಕಾಡ್ಡಿಚ್ಚು ನಿಯಂತ್ರಣ- ಕ್ಕೆ ಗ್ಲೋಬಲ್ ಸೂಪ್ ಟ್ಯಾಂಕ್, 2018ರ ಕೊಡಗಿನ ಜಲ ಪ್ರಳಯದ ಭೀಕರತೆ, ಕಾಡಿನಲ್ಲಿ ಲಂಟಾನ ಕಳೆಯ ಅವಾಂತರ, ಇದರ ನಿಯಂತ್ರಣಕ್ಕೆ ‘ಲಂಟಾನ ಲೇಸ್ ಬರ್ಗ್' ಕೀಟದ ಪ್ರಯೋಗ, ಅರಣ್ಯದಲ್ಲಿ ಮನುಷ್ಯರು ಕಳೆದು ಹೋದರೆ ಕಂಡು ಹಿಡಿಯುವ ಆ್ಯಪ್-ಹೀಗೆ ಸಾಕಷ್ಟು ವಿಷಯಗಳು ಪುಸ್ತಕವನ್ನು ಆವರಿಸಿವೆ. ಎಲ್ಲವೂ ಅಂಕಿ-ಅಂಶಗಳ ಸಮೇತ ಮಾಹಿತಿಪೂರ್ಣವಾಗಿವೆ. ಪುಸ್ತಕದ ಪ್ರತಿ ಲೇಖನಕ್ಕೂ ಸೂಕ್ತ ಚಿತ್ರಗಳನ್ನು ಬಳಸಿರುವುದು ಗಮನ ಸೆಳೆಯುತ್ತದೆ. ಪಶ್ಚಿಮಘಟ್ಟದ ಸಂಕಟಗಳನ್ನು ಲೇಖಕರು ಮನಮಿಡಿಯುವಂತೆ ಚಿತ್ರಿಸಿದ್ದು ಒಟ್ಟಾರೆ ಪರಿಸರ ಸಮತೋಲನಕ್ಕೆ ಕಾಡು, ವನ್ಯಜೀವಿಗಳು ಬೇಕು. ಇವುಗಳ ಉಳಿವಿಗೆ ಜನರು, ಸರಕಾರ ಮುಂಚೂಣಿಯಲ್ಲಿ ನಿಲ್ಲಬೇಕು ಎಂಬ ಲೇಖಕರ ಆಶಯ, ಕಾಳಜಿ ಪ್ರಶಂಸನೀಯ.

• ವಿಶ್ವೇಶ್ವರ ಭಟ್

MORE FEATURES

ಮಕ್ಕಳ ಕುರಿತು ಬರೆಯುವಾಗ ನಾವು ಮಕ್ಕಳೇ ಆಗಬೇಕಾಗುತ್ತದೆ: ತಿರುಮಲ ಮಾವಿನಕುಳಿ

31-05-2024 ಬೆಂಗಳೂರು

‘ಈ ಕಥಾಸಂಕಲನದಲ್ಲಿ ಮಕ್ಕಳ ಭಾವ ಜಗತ್ತಿನ ವಿಕಾಸದ ಜೊತೆಗೆ ಅವರಲ್ಲಿ ಪ್ರಶ್ನಿಸುವ ಮನೋಧರ್ಮವನ್ನು ಉತ್ತೇಜಿಸುವಂತಿ...

ಕನ್ನಡದ ಮನಸುಗಳನ್ನು ಅರಳಿಸಬಲ್ಲ ಕವನಗಳು

31-05-2024 ಬೆಂಗಳೂರು

"ಕನ್ನಡದ ಮೊಟ್ಟಮೊದಲಿನ ಅನೇಕ ರಚನೆಗಳು ಅನುವಾದಕ್ಕೆ ಹತ್ತಿರದ ಬಗೆಯವಾಗಿದ್ದವು ಎನ್ನುವುದು ಇದಕ್ಕೆ ಸಾಕ್ಷಿಯಾಗಿದೆ...

ಸ್ಥಾವರವೆಂಬ ಜ್ವರದ ನಾಡಿ ಹಿಡಿದ ಕವಿತೆಗಳು

30-05-2024 ಬೆಂಗಳೂರು

ದೇವು ಮಾಕೊಂಡ ಅವರ ಕವಿತೆಗಳು ತಮ್ಮಷ್ಟಕ್ಕೆ ತಾವು ಬಿಚ್ಚಿಕೊಳ್ಳುತ್ತಾ ಹೋಗುವ ಗುಣವುಳ್ಳವು. ಕವಿತೆಗಳೆಂದರೆ ಗಟ್ಟಿದನಿಯಲ...