Date: 22-01-2023
Location: ಜೈಪುರ
ಜೈಪುರ: ದಲಿತ ಲೋಕದ ಚಿಂತನೆಗಳು, ಜಾತಿ ವ್ಯವಸ್ಥೆಯ ಇರುವಿಕೆ, ಚೀನಾ-ಭಾರತದ ನಡುವಿನ ಸಂಬಂಧಗಳು, ಭಾಷೆಯಾಗಿ ಹಿಂದಿ ಎದುರಿಸುತ್ತಿರುವ ಸವಾಲುಗಳು, ಕೃತಕ ಬುದ್ಧಿಮತ್ತೆ (ಎಐ) ಒಡ್ಡುವ ಸವಾಲು, ಗಾಯಕಿ ಲತಾ ಜೀವನ ಚರಿತ್ರೆ ರೂಪುಗೊಂಡ ಬಗೆಗಳು ಜೈಪುರ ಸಾಹಿತ್ಯ ಉತ್ಸವ -೨೦೨೩ರ ಮೂರನೇ ದಿನ ವಿಶೇಷ.
ಜೈಪುರ ಸಾಹಿತ್ಯ ಉತ್ಸವವು ಮೊದಲ ಬಾರಿಗೆ ದಲಿತ ಲೇಖಕರು ಮಾತ್ರ ಭಾಗವಹಿಸಿದ ಸಂವಾದಕ್ಕೆ ಸಾಕ್ಷಿಯಾಯಿತು. ಯುವ ವಿದ್ವಾಂಸರಾದ ಡಾ. ಸೂರಜ್ ಯೇಂಗಡೆ, ಸುಮೀತ್ ಸಮೋಸ್ ಹಾಗೂ ಪ್ರಕಾಶಕ ಯೋಗೇಶ್ ಮೈತ್ರೇಯ ಅವರು ಶನಿವಾರ ದರ್ಬಾರ್ ಹಾಲ್ ನಲ್ಲಿ ಜಾತಿಯ ನಡವಳಿಕೆಗಳ ಕುರಿತು ವಿದ್ವತ್ ಪೂರ್ಣ ಹಾಗೂ ಅಪರೂಪದ ಒಳನೋಟಗಳಿರುವ ಸಂಗತಿಗಳನ್ನು ಚರ್ಚಿಸಿದರು.
ಜಾತಿ ವಿದ್ಯುತ್ ನಂತೆ. ಇರುತ್ತದೆ ಆದರೆ ಕಾಣಿಸುವುದಿಲ್ಲ. ಜಾತಿಯ ಸ್ವರೂಪ ಹಾಗೂ ಪ್ರಭುತ್ವದ ಕೇಂದ್ರವು ಹೇಗೆ ’ಪರಕೀಯ’ರನ್ನಾಗಿಸುತ್ತದೆ ಎಂಬ ಸಂಗತಿಗಳ ಸುತ್ತ ಚರ್ಚೆ ನಡೆಯಿತು. ಸುಮೀತ್ ಸಮೋಸ್ ’ಮಧ್ಯಕಾಲೀನ ಭಾರತದ ಚರಿತ್ರೆಯಲ್ಲಿ ಮುಸ್ಲಿಮ್ ಮತ್ತು ಹಿಂದೂ ಮೇಲ್ವರ್ಗಗಳು ಯಾವುದೇ ರೀತಿಯ ಭಿನ್ನ ಅಭಿಪ್ರಾಯಗಳಿಲ್ಲದೇ ಅಧಿಕಾರ ಚಲಾಯಿಸಿದವು ಮತ್ತು ಪರಸ್ಪರ ಹಿತ ಕಾಯ್ದುಕೊಂಡು ಜಾತಿ ವ್ಯವಸ್ಥೆಯನ್ನು ಬಲ ಪಡಿಸಿದವು’ ಎಂದು ವ್ಯಾಖ್ಯಾನಿಸಿದರು.
ಓದು-ಬರವಣಿಗೆ ಅನ್ನುವುದು ಬಿಡುಗಡೆಯ ಸಂಕೇತ. ಬಾಬಾ ಸಾಹೇಬರ ವಿಚಾರಗಳ ಬೆಳಕಿನಲ್ಲಿ ನಡೆಯುವ ಮೂಲಕ ಹೊಸ ಲೋಕ ಕಟ್ಟಿಕೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯ ಯೋಗೇಶ್ ಮೈತ್ರೇಯ ಅವರದಾಗಿತ್ತು.
ಭಾರತ ಮತ್ತು ಚೀನಾದ ನಡುವಿನ ಸಂಬಂಧದ ಐತಿಹಾಸಿಕ ಹಿನ್ನೋಟ- ಸದ್ಯದ ಬಿಕ್ಕಟ್ಟನ್ನು ಎದುರಿಸುವ ಬಗೆಗಳನ್ನು ಕುರಿತು ಫ್ರಂಟ್ ಲಾನ್ ವೇದಿಕೆಯಲ್ಲಿ ನಡೆದ ‘ಆನೆ- ಡ್ರಾಗನ್: ಐತಿಹಾಸಿಕ ಸಂಬಂಧ’ ಸಂವಾದದಲ್ಲಿ ಚರ್ಚಿಸಲಾಯಿತು. ಉತ್ಸವದ ನಿರ್ದೇಶಕರಲ್ಲಿ ಒಬ್ಬರಾದ ವ್ಹಿಲಿಯಂ ಡಾಲ್ರಿಂಪಲ್ ನಡೆಸಿಕೊಟ್ಟ ಸಂವಾದಲ್ಲಿ ತಜ್ಞರಾದ ಶ್ಯಾಮ್ ಶರಣ್, ಜೆಜೆ ಸಿಂಗ್, ತಾನ್‌ಸೇನ್ ಸೇನ್ ಭಾಗವಹಿಸಿದ್ದರು.
೨೧ನೇ ಶತಮಾನದಲ್ಲಿ ಸೂಪರ್ ಪವರ್ ಆಗುವ ಪೈಪೋಟಿಯಲ್ಲಿ ಚೀನಾ ನಡೆಸುತ್ತಿರುವ ’ಪ್ರಕ್ರಿಯೆ’ಗೆ ಭಾರತ ಸೂಕ್ತ ಉತ್ತರ ನೀಡಲೇಬೇಕಾದ ಅನಿವಾರ್ಯತೆ ಇದೆ ಎಂಬುದು ಮಾತುಕತೆಯ ಸಾರವಾಗಿತ್ತು.
ಮೊಗಲ್ ಟೆಂಟ್‌ನಲ್ಲಿ ನಡೆದ ’ಏಕ್ ಹಿಂದಿ ಅನೇಕ್ ಹಿಂದಿ’ ಗೋಷ್ಠಿಯಲ್ಲಿ ಹಿಂದಿಯು ಅನುಭವಿಸುತ್ತಿರುವ ’ಅನಾಥ ಸ್ಥಿತಿ’ಯ ಕುರಿತ ಚರ್ಚೆ ನಡೆಯಿತು.ಲೇಖಕ ಪುಷ್ಪೇಶ್ ಪಂತ್, ಅನಾಮಿಕಾ, ಗೀತಾಂಜಲಿಶ್ರೀ, ನಂದ ಭಾರಧ್ವಾಜ್, ಯತೇಂದ್ರ ಮಿಶ್ರಾ, ಸಂಜೀವ್ ಛಡ್ಡಾ ಭಾಗವಹಿಸಿದ್ದರು.
’ಹಿಂದಿಗೆ ನೈಸರ್ಗಿಕ ತಾಯಿಯೂ ಇಲ್ಲ. ಬಾಡಿಗೆ ತಾಯಿಯೂ ಇಲ್ಲದ ಸ್ಥಿತಿಯಲ್ಲಿದೆ’ ಎಂದು ವಿಷಾದ ವ್ಯಕ್ತಪಡಿಸಿದ ಪುಷ್ಪೇಶ್ ಪಂತ ಅವರು ಈ ಅನಾಥ ಪ್ರಜ್ಞೆಗೆ ಕೇಂದ್ರದ ಪ್ರಭುತ್ವವು ತೋರಿಕೆಯ ಹಿಂದಿ ಪ್ರೀತಿಯೂ ಕಾರಣ. ಹೀಗಾಗಿಯೇ ’ರಾಷ್ಟ್ರಭಾಷೆ’ ದರ್ಜೆ ನೀಡುವ ಉದ್ದೇಶವಿಲ್ಲದ ನಡವಳಿಕೆ ಕಾಣಿಸುತ್ತದೆ ಎಂದರೆ ಅನಾಮಿಕಾ ಅವರು ’ಖಡಿಬೋಲಿಯ ಮೂಲಕ ಆರಂಭವಾದ ಹಿಂದಿಯು ಉರ್ದುವಿನ ಒಡನಾಟದೊಂದಿಗೆ ಭಾಷೆಯಾಗಿ ಅಗಾಧ ಬೆಳವಣಿಗೆ ಕಂಡಿತು. ’ಹಿಂದೂಸ್ತಾನಿ’ ಈಗ ಅನಾಥವಾಗಿದೆ. ಏಕರೂಪಿ ಹಿಂದಿಯ ರೂಪಿಸುವ ಭರದಲ್ಲಿ ಭಾಷಿಕ ವೈವಿಧ್ಯತೆ ಇರುವ ಅನೇಕ ಹಿಂದಿಯ ಅಗತ್ಯ-ಮಹತ್ವ ಮರೆಯಬಾರದು ಎಂದವರು ಹೇಳಿದರು.
ಆಧುನಿಕ ಮತ್ತು ಕೃತಕ ಬುದ್ಧಿ ಮತ್ತೆಯು (ಎಐ) ಮಾನವ ಕುಲದ ಮೇಲೆ ಎಷ್ಟೇ ಪ್ರಭಾವ -ಪರಿಣಾಮ ಉಂಟು ಮಾಡಿದರೂ ಅದು ಮನುಷ್ಯ ಮೆದುಳು ಹಾಗೂ ಸೃಜನಶೀಲತೆಗೆ ಪರ್ಯಾಯ ಆಗುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯವು ಫ್ರಂಟ್‌ಲಾನ್ ವೇದಿಕೆಯಲ್ಲಿ ನಡೆದ ’ತಂತ್ರಜ್ಞಾನ ನೈತಿಕತೆಯ ಮಹಾನ್ ಆಟ’ ಕುರಿತ ಗೋಷ್ಠಿಯಲ್ಲಿ ವ್ಯಕ್ತವಾಯಿತು.
ದರ್ಬಾರ್ ಹಾಲ್ ನಲ್ಲಿ ನಡೆದ ’ಲತಾಜಿ ಲೈಫ್ ಇನ್ ಮ್ಯೂಸಿಕ್’ (ಲತಾ ಅವರ ಸಂಗೀತ ಜೀವನ) ಕುರಿತ ಮಾತುಕತೆಯಲ್ಲಿ ಲೇಖಕ ಯತೇಂದ್ರ ಮಿಶ್ರಾ ಹಾಗೂ ಚಲನಚಿತ್ರ ಸಾಹಿತಿ ಗುಲ್ಜಾರ್ ಭಾಗವಹಿಸಿದ್ದರು. ಯತೇಂದ್ರ ಮಿಶ್ರಾ ಅವರು ಪುಸ್ತಕ ರೂಪುಗೊಂಡ ಬಗೆಯನ್ನು ವಿವರಿಸಿದರು. ಗುಲ್ಜಾರ್ ಅವರು ಮಾತನಾಡಿ ’ಅತ್ಯುತ್ತಮ ಗಾಯಕಿಯಾಗಿದ್ದ ಲತಾ ಅವರು ಅಷ್ಟೇನು ಉತ್ತಮವಲ್ಲದ ನಿರ್ಮಾಪಕಿಯಾಗಿದ್ದರು. ಸೆಟ್‌ನಲ್ಲಿ ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳುವ, ಕಾಳಜಿ ತೋರಿಸುವ, ಪ್ರತಿಯೊಬ್ಬರಿಗೂ ಉಡುಗೋರೆ ಕೊಡುವ ನಿರ್ಮಾಪಕರು ಎಲ್ಲಿರುತ್ತಾರೆ’? ಎಂದ ಅವರು ’ಲತಾ ಅಂತಹ ಲೆಕ್ಕಾಚಾರ ಮಾಡದ ನಿರ್ಮಾಪಕಿ’ ಎಂದು ವಿವರಿಸಿದರು.
ಜೈಪುರ: 17ನೇ ಆವೃತ್ತಿಯ ಸಾಹಿತ್ಯ ಉತ್ಸವಕ್ಕೆ ‘ಭಾರತದ ಪಿಂಕ್ ಸಿಟಿ’ ಎಂದೇ ಹೆಸರಾಗಿರುವ ಜೈಪುರದಲ್ಲಿ ಸಂಭ...
16ನೇ ಆವೃತ್ತಿಯ ಪ್ರತಿಷ್ಠಿತ, ಜೈಪುರ ಸಾಹಿತ್ಯ ಉತ್ಸವವು ಇದೇ 19ರಿಂದ ಆರಂಭಗೊಂಡು ಇಂದು ತೆರೆಕಂಡಿದೆ. ಐದು ದಿನಗಳ ಸಾಹಿ...
ಜೈಪುರ ಸಾಹಿತ್ಯೋತ್ಸವದ 16ನೇ ಆವೃತ್ತಿಗೆ ಸೋಮವಾರ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಈ ಬಾರಿಯ ಉತ್ಸವದಲ್ಲಿ ಹೆಚ್ಚು ಯುವ...
©2024 Book Brahma Private Limited.