ಒಸಾಮಾ ಬಿನ್ ಲಾಡೆನ್ ಜೀವನ ವೃತ್ತಾಂತ ತಿಳಿಯಬೇಕಾಗಿದ್ದರೆ 'ಅಬೋಟ್ಟಾಬಾದ್' ಪುಸ್ತಕವನ್ನ ಓದಲೇಬೇಕು


"ಅಪಘಾನಿಸ್ತಾನ, ತಾಲಿಬಾನ್, ಭಾರತದ ಮೇಲೆ ಉಗ್ರರ ದಾಳಿ, ವಿಮಾನ ಅಪಹರಣ ಇತ್ಯಾದಿ ವಿಚಾರಗಳು ಮನ ಕಲಕುತ್ತವೆ. ಸರಾಗವಾಗಿ ಓದಿಸಿಕೊಂಡು ಹೋಗುವ ಈ ಪುಸ್ತಕ ನೇರಾ ನೇರ ಮಾತಿನ ಶೈಲಿಯನ್ನು ಹೊಂದಿದೆ," ಎನ್ನುತ್ತಾರೆ ಶ್ವೇತಾ ಸದಾಶಿವ. ಅವರು ಸಂತೋಷಕುಮಾರ ಮೆಹಂದಳೆ ಅವರ ‘ಅಬೋಟ್ಟಾಬಾದ್' ಕೃತಿ ಕುರಿತು ಬರೆದ ವಿಮರ್ಶೆ.

ಒಸಾಮಾ ಬಿನ್ ಲಾಡೆನ್ ಜೀವನ ವೃತ್ತಾಂತ ತಿಳಿಯಬೇಕಾಗಿದ್ದರೆ 'ಅಬೋಟ್ಟಾಬಾದ್' ಪುಸ್ತಕವನ್ನ ಓದಲೇಬೇಕು. ಅವನ ಬುದ್ಧಿವಂತಿಕೆ, ಸಂಘಟಿಸುವ ರೀತಿ ಒಮ್ಮೆ ಬೆರಗುಗೊಳಿಸುತ್ತದೆ. ಇದು ಅವನ ದೇಶದ ಏಳ್ಗೆಗೆ ದಕ್ಕಿದ್ದರೆ ಏನೇನೋ ಆಗಿ ಬಿಡುತ್ತಿತ್ತು. ಆದರೆ ಅವನ ಆಯ್ಕೆಯ ದಾರಿ ಬೇರೆಯೇ ಆಗಿತ್ತು. ಆ ದಾರಿ ಅವನಿಗೆ ಭಾರಿ ಬಿತ್ತು. ಅದೇ ಅವನಿಗೆ ಪ್ರಿಯವಾಗಿತ್ತು. ಆದರೆ ಜಗತ್ತಿಗೆ...ಅವನನ್ನು ಹಿಡಿದು ಮಟ್ಟ ಹಾಕುವುದು ಅನಿವಾರ್ಯವಾಗಿತ್ತು. ಧಾರ್ಮಿಕವಾಗಿ ಅವನು ನಂಬಿಕೊಂಡಿದ್ದ, ಅರ್ಥೈಸಿಕೊಂಡಿದ್ದ ಸಿದ್ಧಾಂತಗಳು ಅವನಿಗೆ ಸಾಕಷ್ಟು ಹಿಂಬಾಲಕರನ್ನು ನೀಡಿತಾದರೂ ಎಲ್ಲರ ಹಿತ ಕಾಯುವ ಚಿಂತನೆಗಳು ಅವಾಗಿರಲಿಲ್ಲ. ಮಾನವೀಯ ಮೌಲ್ಯಗಳನ್ನು ಅವು ಗಾಳಿಗೆ ತೂರಿದ್ದವು. ಹಾಗಾಗಿ ಅವು ಜಗಮಾನ್ಯವಾಗಲಿಲ್ಲ. ಅವನ ಕುಕೃತ್ಯಗಳು ಜಗಜ್ಜಾಹೀರಾದರೂ ಆ ಎಲ್ಲಾ ನಡೆಗಳ ರೋಚಕ ಸಂಗತಿಗಳನ್ನು ತಿಳಿಯಲು ಪುಸ್ತಕ ಓದುವುದು ಅನಿವಾರ್ಯ. ಇದರ ಜೊತೆಗೆ ಅಪಘಾನಿಸ್ತಾನ, ತಾಲಿಬಾನ್, ಭಾರತದ ಮೇಲೆ ಉಗ್ರರ ದಾಳಿ, ವಿಮಾನ ಅಪಹರಣ ಇತ್ಯಾದಿ ವಿಚಾರಗಳು ಮನ ಕಲಕುತ್ತವೆ. ಸರಾಗವಾಗಿ ಓದಿಸಿಕೊಂಡು ಹೋಗುವ ಈ ಪುಸ್ತಕ ನೇರಾ ನೇರ ಮಾತಿನ ಶೈಲಿಯನ್ನು ಹೊಂದಿದೆ.

ಹೇಗೆ ಒಸಾಮಾ ತನ್ನ ಗುರಿ ಸಾಧನೆಗೆ ವರ್ಷಗಳ ಕಾಲ ಕಾಯಲು ತಯಾರಿದ್ದನೋ ಹಾಗೆಯೇ ಅಮೇರಿಕ ಕೂಡ ಅವನನ್ನು ಹಿಡಿದು ಮಟ್ಟ ಹಾಕಲು ಸಾಕಷ್ಟು ತಂತ್ರಗಾರಿಕೆಯಿಂದ ತಾಳ್ಮೆಯಿಂದಲೇ ಕಾದು ಕಾರ್ಯಾಚರಿಸಿತ್ತು. ತಕ್ಕ ಪ್ರತಿಫಲ ದಕ್ಕಿಸಿಕೊಂಡಿತ್ತು. ಹಾಗೆಯೇ ಒಸಾಮಾ ತಾನು ಹೋದರೂ ತನ್ನ ಚಿಂತನೆಯ ಬೀಜಗಳನ್ನು ಹಲವರಲ್ಲಿ ಬಿತ್ತಲು ಯಶಸ್ವಿಯಾಗಿದ್ದ. ಒಳಿತು ಕೆಡುಕುಗಳ ವಿವೇಚನೆ ಇಂದು ಜಗತ್ತು ಮಾಡಬೇಕಿದೆ ಅಷ್ಟೇ..

ಒಂದಿಷ್ಟು ರಾಜಕೀಯ ಮತ್ತು ಸ್ವ ಹಿತಾಸಕ್ತಿಯ ಕಾರಣಗಳಿಗೆ ಜಗತ್ತಿನಲ್ಲಿ ನಡೆದ ಅನೇಕ ಯುದ್ಧಗಳು, ಆತ್ಮಹತ್ಯಾ ದಾಳಿಗಳು ಇಲ್ಲಿನ ಕಥಾವಸ್ತು. ಧರ್ಮದ ಸೋಗು ಹಾಕಿಕೊಂಡು ಉದ್ಧಾರ ಮಾಡುತ್ತೇವೆ ಎಂದರು. ನಡೆದದ್ದು ಮಾತ್ರ ಅಮಾಯಕರ ಮಾರಣಹೋಮ. ಮಾನವೀಯತೆಯನ್ನು ಮರೆತು ತಮ್ಮದೇ ವಿಚಾರಧಾರೆಗಳನ್ನು ಎಲ್ಲರ ಮೇಲೆ ಹೇರ ಹೊರಟರು. ಇಂದಿಗೂ ಅದು ಜಗತ್ತಿನಲ್ಲಿ ಮುಂದುವರಿದಿದೆ. ಅನೇಕ ರಾಜಕೀಯ ಹಿತಾಸಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಇದಕ್ಕೆಲ್ಲ ಕುಮ್ಮಕ್ಕು ನೀಡುತ್ತಿರುವುದು ಮಾತ್ರ ವಿಪರ್ಯಾಸದ ಸಂಗತಿ. ಮಾನವ ಜಗತ್ತಿಗೆ ಬೇಕಿರುವುದು ಮಾನವೀಯ ನೆಲೆಗಟ್ಟು. ಹೊರತು ಯುದ್ಧವೋ, ಯಾರದೋ ಹಿತಾಸಕ್ತಿಯೋ, ಲಾಭವೋ ಅಥವಾ ಇನ್ಯಾವುದು ಅಲ್ಲ. ಕಾಡು ಮನುಷ್ಯನಿಗಿಂತ ಅನಾಗರಿಕವಾಗಿ ನಡೆದುಕೊಳ್ಳುವುದು ಸಾಮಾಜಿಕ ಬದುಕಿಗೆ ಸಮ್ಮತವಲ್ಲ. ಉದ್ಧಾರ ಮಾಡಲು, ಶಾಂತಿ ಕಾಪಾಡಲು ಸ್ಥಾಪಿತವಾದ ಅನೇಕ ಸಂಘ ಸಂಸ್ಥೆಗಳು ಹಲ್ಲು ಕಿತ್ತ ಹಾವುಗಳಂತೆ ಬಲಿಷ್ಠರ ತಾಳಕ್ಕೆ ಹೆಜ್ಜೆ ಹಾಕಿದರೆ ಇರುವಿಗೊಂದು ಅರ್ಥವಿದೆಯೇ? ಧರ್ಮ, ದೇಶ, ಗಡಿ, ಭಾಷೆ, ಸಂಸ್ಕೃತಿ, ರಾಜಕೀಯ ಸಂಸ್ಥೆ ಇತ್ಯಾದಿಗಳು ನಾಗರಿಕತೆಯ ಬೆಳವಣಿಗೆಗೆ ನಾವೇ ರೂಢಿಗೆ ತಂದುಕೊಂಡ ನಿಯಮಗಳು. ಅವು ಹೇರಿಕೆಯಲ್ಲ. ಅವರವರ ಜೀವನ ವಿಧಾನಗಳು. ಇವುಗಳ ನಡುವೆ ಸ್ವ ಹಿತಾಸಕ್ತಿ ತಲೆ ಎತ್ತಿತೆಂದರೆ ಅಲ್ಲಿ ಎಲ್ಲವೂ ನಾಶವಾಗುವವು. ಎಂಬುದನ್ನು ಈ ಕೃತಿ ವಿಷದೀಕರಿಸುತ್ತದೆ.

ಇಂತಹ ವಿಚಾರಗಳನ್ನು ನೇರವಾಗಿ, ಸ್ಫುಟವಾಗಿ, ದಿಟ್ಟವಾಗಿ ಓದುಗರ ಮುಂದಿಡುವಲ್ಲಿ ಲೇಖಕರ ಶ್ರಮ ಸಾರ್ಥಕವಾಗಿದೆ. ಘಟನೆಗಳ ಲೀಲಾಜಾಲ ವರ್ಣನೆ ಪುಸ್ತಕವನ್ನು ಕೆಳಗಿಡದಂತೆ ಮಾಡುತ್ತದೆ. ಓದಿಗೆ ಇಂಬು ಕೊಟ್ಟು ಚಿಂತನೆಗೆ ಹಚ್ಚುವ ಪುಸ್ತಕ.

ವಂದನೆಗಳೊಂದಿಗೆ..

-ಶ್ವೇತಾ ಸದಾಶಿವ.

MORE FEATURES

'ಸಾವಿನ ದಶಾವತಾರ' ಒಬ್ಬ ಭಿನ್ನಮತೀಯ ಕಾದಂಬರಿಕಾರನ ಕೃತಿ; ಎ. ಪಿ. ಅಶ್ವಿನ್ ಕುಮಾರ್

02-06-2024 ಬೆಂಗಳೂರು

"ಪ್ರತೀ ಕಾದಂಬರಿಯೂ ಎರಡು ಕೆಲಸಗಳನ್ನು ಮಾಡುತ್ತಿರುತ್ತದೆ. ಕಾದಂಬರಿ ಎನ್ನುವ ಪ್ರಕಾರವನ್ನು ಬಳಸಿಕೊಂಡು ಒಂದು ಕತೆ...

ಶೀರ್ಷೇಂಧು ಅವರ ಕೃತಿಗಳು ಬದಲಾದ ಆಧುನಿಕ ಸಮಾಜವನ್ನು ಚಿತ್ರಿಸುತ್ತವೆ

02-06-2024 ಬೆಂಗಳೂರು

‘ಈ ಕಥಾ ಸಂಕಲನದಲ್ಲಿ ಆರು ಕಥೆಗಳಿವೆ‌. ಈ ಆರೂ ಕಥೆಗಳು ಆಧುನಿಕ ಬಂಗಾಲದ ಸಾಮಾಜಿಕ ಚಿತ್ರಣವನ್ನು ಕೊಡುತ್ತದೆ...

ವಾರದ ಲೇಖಕ ವಿಶೇಷದಲ್ಲಿ ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ ಬಿ. ಪುಟ್ಟಸ್ವಾಮಯ್ಯ

02-06-2024 ಬೆಂಗಳೂರು

"ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ, ಕಥೆಗಾರ, ಕವಿಯಾಗಿ ಮನ...