ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಹಾವನ್ನು ಅಧ್ಯಯನ ಮಾಡುವ ಪ್ರಯತ್ನವೇ 'ಹಾವು' ಕೃತಿ


'ಹಾವು ಕಚ್ಚಿ ಸತ್ತವರಿಗಿಂತ ಹಾವಿನ ಭಯದಿಂದಲೇ ಸತ್ತವರು ಜಾಸ್ತಿ' ಎಂಬುದು ಅಧ್ಯಯನದಿಂದ ದೃಢಪಟ್ಟಿದೆ. ಅಂದರೆ, ಇದೊಂದು ಮನಸ್ಥಿತಿ ಎಂದಾಯ್ತು. ಹಾಗಾಗಿ ಇಲ್ಲಿ ನಮ್ಮ ಮನಸ್ಸನ್ನು ಸರಿ ಮಾಡಿಸಿಕೊಂಡು ವಿಲ್‌ಪವ‌ರ್ ಹೆಚ್ಚಿಸಿಕೊಂಡರೆ ಹಾವಿನ ಭಯ ನಮ್ಮಿಂದ ದೂರವಾಗುತ್ತದೆ ಎನ್ನುತ್ತಾರೆ ವಿಶ್ವೇಶ್ವರ ಭಟ್. ಅವರು ಐತಿಚಂಡ ರಮೇಶ್ ಉತ್ತಪ್ಪ ನವರ ‘ಹಾವು’ ( ನಂಬಿಕೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ) ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.

ಸಂಪಾದಕ ಮಿತ್ರ ಐತಿಚಂಡ ರಮೇಶ್ ಉತ್ತಪ್ಪ, ಮನಃಶಾಸ್ತ್ರದ ವಿದ್ಯಾರ್ಥಿ ಹಾಗೂ ಈ ಬಗ್ಗೆ ಸಾಕಷ್ಟು ಪುಸ್ತಕಗಳನ್ನು ಓದಿಕೊಂಡಿದ್ದರ ಪ್ರತಿಫಲವಾಗಿ 'ಹಾವು, ನಂಬಿಕೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ' ಪುಸ್ತಕ ರಚಿಸಿದ್ದಾರೆ. ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಹಾವನ್ನು ಅಧ್ಯಯನ ಮಾಡುವ ಪ್ರಯತ್ನ ಬಹುಶಃ ಇದೇ ಮೊದಲು. ಇಂಥ ಪ್ರಯತ್ನ ಕನ್ನಡದಲ್ಲಿ ನಡೆದಿಲ್ಲ ಅನ್ನಿಸುತ್ತದೆ.

ಹಾವಿನ ಕುರಿತ ಈ ಪುಸ್ತಕ ಚಿಕ್ಕದಾದರೂ ವಿಷಯದ ಹರವು ಗಾಢವಾಗಿದೆ. ಓದುತ್ತಾ ಹೋದಂತೆ ಹಾವುಗಳ ವಿಚಾರ ನಮ್ಮ ಮನಸ್ಸನ್ನು ಸಂಪೂರ್ಣ ಆವರಿಸಿಬಿಡುತ್ತದೆ. ವಿವಿಧ ತಳಿಯ ಹಾವುಗಳು, ಅವುಗಳ ಗುಣ-ಸ್ವಭಾವ ನಮ್ಮಲ್ಲಿ ತುಂಬಿಕೊಂಡು ಹಾವುಗಳ ಬಗ್ಗೆ ನಮಗಿದ್ದ ಭಯ, ಕ್ರೂರತ್ವ ದೂರವಾಗಿ ಬಿಡುತ್ತದೆ. ಹಾವುಗಳ ಬಗ್ಗೆ ಪ್ರೀತಿ, ಕಾಳಜಿ ಬೆಳೆಯುತ್ತದೆ. 'ಹಾವುಗಳಿಗೆ ನಾವು ತೊಂದರೆ ಕೊಡದೆ ಅವು ನಮಗೆ ಏನೂ ಮಾಡುವುದಿಲ್ಲ' ಎಂಬ ಅರಿವು ಮೂಡುತ್ತದೆ. ಹಾಗಾಗಿಯೇ ಲೇಖಕರು ಈ ಕೃತಿಯನ್ನು ಹಾವು ರಕ್ಷಕರಿಗೆ ಅರ್ಪಣೆ ಮಾಡಿರುವುದು ಸಮಂಜಸವಾಗಿದೆ.

'ಪ್ರಕೃತಿಯ ಸಮತೋಲನದಲ್ಲಿ ಹಾಗೂ ರೈತನ ಬೆಳೆಗಳ ರಕ್ಷಣೆಯಲ್ಲಿ ಹಾವುಗಳ ಪಾತ್ರ ಬಹುದೊಡ್ಡದು. ಆದರೆ, ಅದೇ ಮಾನವ ಹಾವುಗಳನ್ನು ನಿರ್ದಾಕ್ಷಿಣ್ಯವಾಗಿ ಬಡಿದು ಕೊಲ್ಲುವುದು ಕ್ರೂರತನ. ಯಾವುದೇ ಪ್ರಾಣಿಯನ್ನು ಕೊಲ್ಲಬೇಡಿ ಎನ್ನುವ ಮನವಿಗೆ ಸ್ಪಂದಿಸುತ್ತಾರೆ. ಆದರೆ ಹಾವುಗಳನ್ನು ಕೊಲ್ಲದಿರಿ ಎನ್ನುವ ಜಾಗೃತಿ ಮೂಡಿಸುವುದು ಸುಲಭವಲ್ಲ' ಎಂಬ ಮಾತು ಅಕ್ಷರಶಃ ನಿಜ. 'ಕಲ್ಲು ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ' ಎಂಬ ಬಸವಣ್ಣನವರ ವಚನ ಈಗಲೂ ಪ್ರಸ್ತುತವಾಗಿದೆ.

ಶತಮಾನಗಳಿಂದ ಹಾವುಗಳ ಕುರಿತು ನಂಬಿಕೆ, ಐತಿಹ್ಯ, ಮೂಢನಂಬಿಕೆ, ಜಾನಪದ ನಂಬಿಕೆ, ದೈವೀ ಶಕ್ತಿಯ ಕಲ್ಪನೆಗಳಿವೆ. ನಮ್ಮ ಕಲ್ಪನೆಯಿಂದ ನಾಗ ಲೋಕವನ್ನೇ ಪಾತಾಳದಲ್ಲಿ ಸೃಷ್ಟಿಸಿದ್ದೇವೆ. ನಾಗರಾಜ, ನಾಗಕನ್ಯ, ಕಾಳಸರ್ಪ, ಆದಿಶೇಷ, ಹತ್ತು ಹೆಡೆ, ಏಳು ಹೆಡೆಗಳ ಘಟಸರ್ಪ ಹೀಗೆಲ್ಲ ಕರೆದಿದ್ದೇವೆ. ಯಾವ ಪ್ರಾಣಿ-ಪಕ್ಷಿಗಳೂ ಮನುಷ್ಯನ ಬದುಕಿನಲ್ಲಿ ಇಷ್ಟೊಂದು ಪರಿಣಾಮ ಬೀರಿಲ್ಲ. ಹಾಗಾಗಿ ಊರು, ಕೇರಿ, ಓಣಿಗಳಲ್ಲಿ ನಾಗನ ಪ್ರತಿಷ್ಠಾಪನೆ ಮಾಡಿದ್ದೇವೆ.

ಹಾವಿನ ದ್ವೇಷ ಹನ್ನೆರಡು ವರ್ಷ ಇರುತ್ತದೆ. ತನಗೆ ತೊಂದರೆ ಕೊಟ್ಟ ವೈರಿ ಅಷ್ಟು ವರ್ಷ ಸಿಗದೆ ಬಚಾವ್ ಆದರೆ ಸವೆದು ಸವೆದು ಉರಿಸಿಂಗಿಯಾಗಿ ಕೆಳಗೆ ಬಿದ್ದು ತನ್ನ ಬಾಲವನ್ನೇ ಕಚ್ಚಿಕೊಂಡು ಸಾಯುತ್ತದೆ ಎಂಬ ಮಾತೂ ಇದೆ. ಅಂದರೆ, ಈ ಪ್ರಸಂಗ ಹಾವಿನ ದ್ವೇಷಕ್ಕೆ, ಉರಿಸಿಂಗಿ ಅವತಾರಕ್ಕೆ ಕಾರಣ ಎನ್ನಲಾಗುತ್ತದೆ. ಇಂಥ ಸಾಕಷ್ಟು ಹಾವುಗಳ ಬಗ್ಗೆ ಇರುವ ಅನುಮಾನಕ್ಕೆ ಈ ಪುಸ್ತಕ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿ ಉತ್ತರ ನೀಡುತ್ತದೆ.

ಲೇಖಕರು ಹಾವುಗಳ ಅಧ್ಯಯನ ಹಾಗೂ ಬರಹದ ನಿಟ್ಟಿನಲ್ಲಿ ಮೈಸೂರಿನ ಸ್ನೇಕ್ ಶಿವು, ಬಿಳಿಗಿರಿರಂಗನ ಬೆಟ್ಟದ ಸ್ನೇಕ್ ಸುಂದರ್ ನೀಡಿದ ಮಾಹಿತಿ, ಸಹಕಾರವನ್ನು ನಾವಿಲ್ಲಿ ಮರೆಯುವಂತಿಲ್ಲ. ನಮಗೆ ಭೀಕರ, ಭಯಂಕರವಾಗಿ ಕನಸು-ಮನಸಿನಲ್ಲೂ ಕಾಡುವ ಹಾವುಗಳು ಉರಗ ಪ್ರಿಯರಿಗೆ ಬೆಸ್ಟ್ ಫ್ರೆಂಡ್ಸ್. ವಿಷಪೂರಿತ ಹಾವುಗಳನ್ನು ಹಿಡಿಯುವ ರೀತಿ, ಮಗುವಿನಂತೆ ಎತ್ತಿಕೊಳ್ಳುವ ವಿಧಾನ, ಬುಸುಗುಡುವ ಹೆಡೆಗೆ ಮುತ್ತಿಕ್ಕುವ ಪರಿ, ಹಾವು ಕಚ್ಚಿದವರಿಗೆ ನೀಡುವ ಔಷಧಿ, ಮಂತ್ರಿಸಿ ಕೊಡುವ ಕಲ್ಲು-ಇವೆಲ್ಲವೂ ಕುತೂಹಲ ಮೂಡಿಸುತ್ತವೆ. ಅಷ್ಟೇ ಏಕೆ, ಈ ಪುಸ್ತಕದಲ್ಲಿರುವ ವಿವಿಧ ತಳಿಯ ಹಾವುಗಳ ಚಿತ್ರ ನೋಡಿದರೂ ಮೈ 'ಜುಂ' ಎನ್ನುತ್ತದೆ. ರೋಮಗಳು ಎದ್ದು ನಿಂತು ರೋಚಕವಾಗಿಸುತ್ತದೆ. ಇಂಥ ಹಾವುಗಳ ರಕ್ಷಣೆಯಲ್ಲಿ ತೊಡಗಿರುವ ಉರುಗ ಪ್ರಿಯರಿಗೆ ಸೆಲ್ಯೂಟ್ ಹೇಳಲೇಬೇಕು. ಈ ಪುಸ್ತಕದ ಆಶಯವೂ ಅದೇ ಆಗಿದೆ.

ಸ್ನೇಕ್ ಸುಂದರ್ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಮದ್ದೂರಿನ ಸರಕಾರಿ ಉದ್ಯೋಗಸ್ಥ ಕುಟುಂಬಸ್ಥರಿಗೆ ಬೊಂಬೆಯಂತೆ, ಹಗ್ಗದಂತೆ ಕಾಣಿಸಿಕೊಳ್ಳುತ್ತಿದ್ದ ಹಾಗೂ ಕನಸಿನಲ್ಲೂ ಕಾಡುತ್ತಿದ್ದ ನಾಗರ ಕಾಟವನ್ನು ಪರಿಹರಿಸುತ್ತಾರೆ. “ನಿಮ್ಮ ಕಾಡುತ್ತಿದ್ದ ಹಾವುಗಳು ಇಲ್ಲಿವೆ ನೋಡಿ' ಎಂದು ಬೇರೆ ಕಡೆ ಹಿಡಿದ ಹಾವುಗಳನ್ನು ತೋರಿಸಿ, ಅವರ ನಂಬಿಕೆಯಂತೆ ಪೂಜೆ ಮಾಡಿ, ಕೇವಲ 300 ರೂಪಾಯಿಯಲ್ಲಿ ನಾಗರ ಕಾಟ ತಪ್ಪಿಸಿದ್ದು ಮನೋಧರ್ಮದ ಮೇಲೆಯೇ. ನಾಗದೋಷ ಸುಳ್ಳು ಎನ್ನುವುದಕ್ಕಿಂತ ಅದಕ್ಕೆ ಪರಿಹಾರವಿದೆ ಎಂದರೆ ಭಯಗ್ರಸ್ತರ ಮನಸ್ಸು ಸಮಾಧಾನಗೊಳ್ಳುತ್ತದೆ.

ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ಇತ್ಯಾದಿ ದೇವಸ್ಥಾನಗಳಲ್ಲೂ ನಂಬಿಕೆ ಆಧಾರದ ಮೇಲೆ ನಾಗದೋಷ ಪರಿಹಾರ ಪೂಜೆ ಮಾಡುತ್ತಾರೆ. ಇದರಿಂದಲೂ ನಾಗದೋಷ ಪರಿಹಾರ ಆಗಿರುವುದೂ ಉಂಟು. ಇದು ಅವರವರ ನಂಬಿಕೆಗೆ ಬಿಟ್ಟಿದ್ದು. ಅಂಥ ನಂಬಿಕೆಗಳನ್ನು ಪ್ರಶ್ನಿಸುವ ಅಧಿಕಾರ ನಮಗಿಲ್ಲ. ಆದರೆ ನಾಗದೋಷ ಹೆಸರಿನಲ್ಲಿ ಪೂಜೆ ಮಾಡಿ ಸುಲಿಗೆ ಮಾಡುವ ಕಪಟ ಮಂತ್ರವಾದಿ, ಪೂಜಾರಿಗಳಿಂದ ದೂರ ಇರುವುದು ಲೇಸು ಎಂಬುದರ ಅರಿವನ್ನೂ ಈ ಪುಸ್ತಕ ಮೂಡಿಸುತ್ತದೆ.

'ಹಾವು ಕಚ್ಚಿ ಸತ್ತವರಿಗಿಂತ ಹಾವಿನ ಭಯದಿಂದಲೇ ಸತ್ತವರು ಜಾಸ್ತಿ' ಎಂಬುದು ಅಧ್ಯಯನದಿಂದ ದೃಢಪಟ್ಟಿದೆ. ಅಂದರೆ, ಇದೊಂದು ಮನಸ್ಥಿತಿ ಎಂದಾಯ್ತು. ಹಾಗಾಗಿ ಇಲ್ಲಿ ನಮ್ಮ ಮನಸ್ಸನ್ನು ಸರಿ ಮಾಡಿಸಿಕೊಂಡು ವಿಲ್‌ಪವ‌ರ್ ಹೆಚ್ಚಿಸಿಕೊಂಡರೆ ಹಾವಿನ ಭಯ ನಮ್ಮಿಂದ ದೂರವಾಗುತ್ತದೆ. ಹಾವಿನ ಭಯ ಹೋಗಿ ನಮ್ಮ ಮನಸಲ್ಲಿ ಅರಳುತ್ತದೆ ಹೂವು. ಭಯ ಓಡಿಸುವ ಕೆಲಸವನ್ನೂ ಈ ಕೃತಿ ಮೂಲಕ ಲೇಖಕರು ಮಾಡಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

'ಹಾವುಗಳು ಮನುಷ್ಯರಲ್ಲ, ಅವುಗಳಿಗೆ ರಾಗ-ದ್ವೇಷಗಳಿಲ್ಲ. ಚಿಂತಿಸುವ ಮನಸ್ಸು, ಮೆದುಳು ಹಾವುಗಳಿಗೆ ಇಲ್ಲ. ಆಹಾರ ಹುಡುಕಬೇಕು, ಇದ್ದಷ್ಟು ಕಾಲ ಬದುಕಬೇಕು' ಎಂಬುದಷ್ಟೇ ಹಾವುಗಳ ಉದ್ದೇಶ. 'ದಯೆಯೇ ಧರ್ಮದ ಮೂಲ' ಹೋಗಿ 'ಭಯವೇ ಧರ್ಮದ ಮೂಲವಯ್ಯ' ಎಂಬಂತಾಗಿದೆ. ಉಳಿದೆಲ್ಲವನ್ನೂ ಕಲ್ಪಿಸಿಕೊಂಡಿದ್ದು, ಹುಟ್ಟಿಸಿಕೊಂಡಿದ್ದು ನಾವೇ. ಹಾವನ್ನು ಕೊಂದಾಗ ನಮ್ಮೊಳಗೆ ಪಾಪಪ್ರಜ್ಞೆ ಮೂಡುತ್ತದೆ. ಇದರಿಂದ ಮಾನಸಿಕವಾಗಿ ಖಿನ್ನರಾಗುತ್ತೇವೆ. ಇದು ಬೆನ್ನು ಹತ್ತಿದ ಬೇತಾಳದಂತೆ ನಾಗದೋಷವಾಗಿ ನಮ್ಮ ಮನಸ್ಸನ್ನು ಆವರಿಸಿ ಕಾಡುತ್ತದೆಯಷ್ಟೇ. ಇವೆಲ್ಲ ನಮ್ಮ ಮಾನಸಿಕ ರೋಗಗಳು ಎಂಬ ಸತ್ಯವನ್ನು ಈ ಕೃತಿ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಓದುಗರಿಗೆ ಕಟ್ಟಿಕೊಡುತ್ತದೆ. ಜತೆಗೆ ಪರಿಹಾರವೂ ಇಲ್ಲಿ ದೊರೆಯುತ್ತದೆ.

ನನಗೆ ತಿಳಿದಂತೆ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ, ಹಾವಿನ ಬಗ್ಗೆ ಕನ್ನಡದಲ್ಲಿ ಬಂದ ವಿಶಿಷ್ಟ-ವಿಭಿನ್ನ, ಅಪರೂಪದ ಪುಸ್ತಕ ಇದಾಗಿದೆ. ಗಾತ್ರದಲ್ಲಿ ಚಿಕ್ಕದಾದರೂ ಹಾವಿನ ಬಗ್ಗೆ ಪಿಎಚ್.ಡಿ ಗ್ರಂಥ ಬರೆಯುವಷ್ಟು ವಿಷಯ ಸಾಮಗ್ರಿ ಇಲ್ಲಿದೆ. ಇದನ್ನು ವಿಸ್ತರಿಸುತ್ತಾ ಹೋದರೆ ಮಹಾಪ್ರಬಂಧ ಬರೆದು ಮೈಸೂರು ವಿಶ್ವವಿದ್ಯಾಲಯದಿಂದಲೇ ಪಿಎಚ್.ಡಿ ಪದವಿ ಪಡೆಯಬಹುದು. ಆ ನಿಟ್ಟಿನಲ್ಲಿ ಸಂಪಾದಕ ಮಿತ್ರ ಐತಿಚಂಡ ರಮೇಶ್ ಉತ್ತಪ್ಪ ದಿಟ್ಟಹೆಜ್ಜೆ ಇಡಲಿ ಎಂದು ಆಶಿಸುತ್ತಾ ನನ್ನ ನಾಲ್ಕು ಮಾತು ಮುಗಿಸುವೆ.

-ವಿಶ್ವೇಶ್ವರ ಭಟ್

MORE FEATURES

'ಸಾವಿನ ದಶಾವತಾರ' ಒಬ್ಬ ಭಿನ್ನಮತೀಯ ಕಾದಂಬರಿಕಾರನ ಕೃತಿ; ಎ. ಪಿ. ಅಶ್ವಿನ್ ಕುಮಾರ್

02-06-2024 ಬೆಂಗಳೂರು

"ಪ್ರತೀ ಕಾದಂಬರಿಯೂ ಎರಡು ಕೆಲಸಗಳನ್ನು ಮಾಡುತ್ತಿರುತ್ತದೆ. ಕಾದಂಬರಿ ಎನ್ನುವ ಪ್ರಕಾರವನ್ನು ಬಳಸಿಕೊಂಡು ಒಂದು ಕತೆ...

ಶೀರ್ಷೇಂಧು ಅವರ ಕೃತಿಗಳು ಬದಲಾದ ಆಧುನಿಕ ಸಮಾಜವನ್ನು ಚಿತ್ರಿಸುತ್ತವೆ

02-06-2024 ಬೆಂಗಳೂರು

‘ಈ ಕಥಾ ಸಂಕಲನದಲ್ಲಿ ಆರು ಕಥೆಗಳಿವೆ‌. ಈ ಆರೂ ಕಥೆಗಳು ಆಧುನಿಕ ಬಂಗಾಲದ ಸಾಮಾಜಿಕ ಚಿತ್ರಣವನ್ನು ಕೊಡುತ್ತದೆ...

ವಾರದ ಲೇಖಕ ವಿಶೇಷದಲ್ಲಿ ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ ಬಿ. ಪುಟ್ಟಸ್ವಾಮಯ್ಯ

02-06-2024 ಬೆಂಗಳೂರು

"ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ, ಕಥೆಗಾರ, ಕವಿಯಾಗಿ ಮನ...