ಕವನಗಳನ್ನೇಕೆ ಬರೆಯಬೇಕು? ಬರೆದ ಕವನಗಳನ್ನೆಲ್ಲಾ ಪ್ರಕಟಿಸಲೇಬೇಕೆ?


‘ಕವಿತೆಗಳು ಹುಟ್ಟುವಾಗ ನಮಗೇ ಅರಿವಿಲ್ಲದಂತೆ ನಮ್ಮ ಪೂರ್ವಗ್ರಹಗಳನ್ನೂ ಮೀರಿ ನಮ್ಮ ನಿಜವಾದ ಒಳಗಿನ ನಿಶ್ಯಬ್ದ ಮಾತುಗಳು ವ್ಯಕ್ತವಾಗುತ್ತವೆ’ ಎನ್ನುತ್ತಾರೆ ಮೈ.ಶ್ರೀ. ನಟರಾಜ. ಅವರು ‘ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ’ ಕೃತಿಯ ಕುರುತು ಬರೆದ ಅರಿಕೆ ನಿಮ್ಮ ಓದಿಗಾಗಿ.

ಕವನಗಳನ್ನೇಕೆ ಬರೆಯಬೇಕು? ಬರೆದ ಕವನಗಳನ್ನೆಲ್ಲಾ ಪ್ರಕಟಿಸಲೇಬೇಕೆ? ಜಾಲತಾಣದಲ್ಲಿ ಒಂದೊಂದೇ ಕವಿತೆಗಳನ್ನು ಬಿಡಿ ಬಿಡಿಯಾಗಿ ಪ್ರಕಟಿಸಬೇಕೇ ಅಥವಾ ಹಲವಾರು ಕವಿತೆಗಳನ್ನು ಸಂಗ್ರಹಮಾಡಿ ಸಂಕಲನರೂಪದಲ್ಲಿ ಪ್ರಕಟಿಸಬೇಕೇ? ಸಾಹಿತ್ಯಾಸಕ್ತ ಮಿತ್ರರ ಸಭೆಗಳಲ್ಲಿ ಓದಿ ಹಂಚಿಕೊಂಡರೆ ಸಾಲದೇ? ಹಿಂದೆ ಬರೆದು ಪ್ರಕಟಿಸಿದ ಕವಿತೆಗಳನ್ನು ಎಷ್ಟು ಜನ ಓದಿರಬಹುದು? ಅವರಲ್ಲಿ ಎಷ್ಟು ಜನ ನನ್ನ ಕವಿತೆಗಳನ್ನು ಮೆಚ್ಚಿಕೊಂಡಿರಬಹುದು? ಇವೇ ಮುಂತಾದ ಪ್ರಶ್ನೆಗಳು ಪ್ರಾಯಶಃ ಎಲ್ಲ ಕವಿಗಳನ್ನೂ ಕಾಡುತ್ತವೆ, ಇದು ಸಹಜವೂ ಇರಬಹುದು. ಈ ರೀತಿಯ ಪ್ರಶ್ನೆಗಳನ್ನು ಕೇಳಿಕೊಂಡಾಗ ಅನೇಕ ಬಾರಿ ಸುಮ್ಮನೆ ಮಹಾಕವಿಗಳು ಬರೆದ ಕಾವ್ಯಗಳನ್ನು ಓದಿ ಸಂತಸಪಟ್ಟರೆ ಸಾಕಲ್ಲವೇ, ನಾವು ಬರೆಯದಿದ್ದರೆ ಏನು ನಷ್ಟ ಎನಿಸಿ ಮನಸ್ಸನ್ನು ನಿರುತ್ಸಾಹಗೊಳಿಸುವ ಪ್ರತಿಕ್ರಿಯೆಗಳು ಹುಟ್ಟುತ್ತವೆ. ಆದರೂ ಒಳಗೆ ಅಡಗಿರುವ ಕವಿ ಅದಮ್ಯನಾಗಿ ಆಗಾಗ್ಗೆ ಪ್ರಕಟವಾಗುತ್ತಲೇ ಇರುತ್ತಾನೆ. ಹಿಂದೆ ನಡೆದ ಒಂದು ಪ್ರಸಂಗವೋ, ಇಂದೇ ನಡೆಯುತ್ತಿರುವ ಒಂದು ಸುದ್ದಿಯೋ ಮನಸ್ಸನ್ನು ಕದಡಿ ಪಾತ್ರೆಗೆ ಅಡಿಯಿಂದ ಉರಿಯಿಟ್ಟು ಭಾವನೆಗಳನ್ನು ಕುದಿಸಿಬಿಡುತ್ತದೆ.

ಎಲ್ಲೋ ನಡೆಯುತ್ತಿರುವ ಹಿಂಸೆ, ಕೊಲೆ, ದೌರ್ಜನ್ಯ, ಯುದ್ಧ, ಚರ್ಚೆ, ಎಲ್ಲವೂ ಕಣ್ಣ ಮುಂದೇ ನಡೆಯುತ್ತಿರುವಂತೆ ಮಾಧ್ಯಮದ ಪ್ರತಿನಿಧಿಗಳು ತಮ್ಮ ಜರಡಿಯಾಡಿಸಿ ಹೊರದಬ್ಬುತ್ತಾರೆ. ಪ್ರತಿಯೊಂದು ಮಾಧ್ಯಮ ಸಂಸ್ಥೆಗೂ, ಅದರ ಪ್ರತಿನಿಧಿಗೂ ತಮ್ಮವೇ ಆದ ಪೂರ್ವಗ್ರಹಗಳಿದ್ದೇ ಇರುತ್ತವೆ. ನಾವು ನಮ್ಮವೆಂದು ತಿಳಿದ ಭಾವನೆಗಳು ಇವರಿಂದ ಪ್ರಭಾವಿತವಾದ ನಂತರ ನಿಜವಾಗಿಯೂ ನಮ್ಮವೇ ಹೌದೇ ಎಂಬ ಅನುಮಾನವೂ ಉಂಟಾಗುತ್ತದೆ. ಇಷ್ಟಾದರೂ ಭಾವನೆಗಳು ಸರ್ವ- ತಂತ್ರ-ಸ್ವತಂತ್ರ ಸ್ಪುರಣಗಳಾಗಿ ಎಲ್ಲೋ ಮುಚ್ಚಿಟ್ಟುಕೊಂಡಿರುತ್ತವೆ. ಕವಿತೆಗಳು ಹುಟ್ಟುವಾಗ ನಮಗೇ ಅರಿವಿಲ್ಲದಂತೆ ನಮ್ಮ ಪೂರ್ವಗ್ರಹಗಳನ್ನೂ ಮೀರಿ ನಮ್ಮ ನಿಜವಾದ ಒಳಗಿನ ನಿಶ್ಯಬ್ದ ಮಾತುಗಳು ವ್ಯಕ್ತವಾಗುತ್ತವೆ. ಅವಲ್ಲಿ ಕೆಲವಾದರೂ ಕಾಗದದ ಮೇಲೋ ಗಣಕದ ತೆರೆಯ ಮೇಲೋ ಬಂದು ಬಿದ್ದಾಗ ಒಂದು ಕವಿತೆಯ ಕರಡು ಸಿದ್ದಗೊಳ್ಳುತ್ತದೆ. ನಂತರ ಅದನ್ನು ಜಾಲದ ಮೇಲೆ ತೇಲಿಬಿಡಬಹುದು ಅಥವಾ ಸಾಹಿತ್ಯಾಸಕ್ತ ಮಿತ್ರರಲ್ಲಿ ಹಂಚಿಕೊಳ್ಳಬಹುದು, ಯಾವುದೋ ಕವಿಗೋಷ್ಠಿಯಲ್ಲಿ ಓದಲೂಬಹುದು. ಹೀಗೆ ಸಂಗ್ರಹವಾದ ಕವಿತೆಗಳನ್ನು ಈ ಸಂಕಲನದಲ್ಲಿ ಸೇರಿಸಿಕೊಂಡಿದ್ದೇನೆ.

ಈ ಸಂಕಲನದ ಹೆಚ್ಚಿನ ಕವಿತೆಗಳು ನನ್ನ ಹಿಂದಿನ ಸಂಗ್ರಹಗಳು ಪ್ರಕಟವಾದ ನಂತರ ಬರೆದವು.ಕೆಲವು ಅಮೆರಿಕದಲ್ಲಿ ನಡೆದ ಘಟನೆಗಳಿಗೆ ಪ್ರತಿಕ್ರಿಯೆಯಾಗಿ ಬರೆದಂಥವು. ಅಮೆರಿಕದ ಚರಿತ್ರೆ, ಮತ್ತು ಇತ್ತೀಚಿನ ರಾಜಕೀಯ ಇಲ್ಲಿನ ಹಲವಾರು ಕವಿತೆಗಳಲ್ಲಿ ವ್ಯಕ್ತವಾಗಿವೆ. ಒಂದೆರಡು ಹಿಂದೆ ಪ್ರಕಟವಾದ ಕವನಗಳೂ ಸೇರಿಕೊಂಡಿವೆ. ಕವಿಗೋಷ್ಠಿಗಳಲ್ಲಿ ಓದಲು ಬರೆದ ಕವಿತೆಗಳೂ ಸಾಕಷ್ಟಿವೆ. ಅಮೆರಿಕದಲ್ಲಿ ನಾನು ಕಾಲಿಟ್ಟ ದಿನದಿಂದ ಹಿಡಿದು ಇಲ್ಲಿನ ಕನ್ನಡ ಸಂಘಗಳು ಸ್ವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ವರ್ತಮಾನದ ರಾಜಕೀಯ ಗೊಂದಲಗಳಿಂದ ರೋಸಿ ಹುಟ್ಟಿದ ಭ್ರಮನಿರಸನದವರೆಗೂ ಹರಡಿರುವ ಮನಸ್ಥಿತಿಗಳನ್ನು ಪ್ರತಿನಿಧಿಸುವ ಕವಿತೆಗಳು ಅಮೆರಿಕದಲ್ಲಿ ಕಳೆದ ಐದು ದಶಕಗಳಿಗೂ ಹೆಚ್ಚಿನ ಜೀವನದ ಪತಿಬಿಂಬ.

ಸಂಕಲನದ ಎರಡನೆಯ ಭಾಗದಲ್ಲಿ ಹೆಚ್ಚಿನವು ಸಾಂದರ್ಭಿಕ ಕವಿತೆಗಳು, ಗುರು ಹಿರಿಯರ, ಬಂಧುಮಿತ್ರರ ಕುರಿತ ವಿಶೇಷ (ಸಂತೋಷಕರ ಹಾಗೂ ಗಂಭೀರ) ಸಂದರ್ಭಗಳಿಗಾಗಿ ಬರೆದಂಥವು. ಸಾರ್ವಜನಿಕ ದೃಷ್ಟಿಯಿಂದ ಇವು ಸೀಮಿತವೆನಿಸ- ಬಹುದಾದರೂ ವೈಯಕ್ತಿಕವಾಗಿ ನನಗೆ ಆಪ್ತವಾದ ಕಾರಣ ಅವುಗಳನ್ನೂ ಇಲ್ಲಿ ಸೇರಿಸಿಕೊಂಡಿದ್ದೇನೆ. ಈ ಸಂದರ್ಭದಲ್ಲಿ ಹಲವರ ಸಹಾಯ ಮತ್ತು ಸಹಕಾರವನ್ನು ನೆನೆಯುವುದು ನನ್ನ ಕರ್ತವ್ಯವಾಗಿದೆ.

ಸಂಕಲನದ ಕರಡು ಪ್ರತಿಯನ್ನೋದಿ ತಮ್ಮ ಪ್ರಾಮಾಣಿಕ ಅನಿಸಿಕೆಗಳನ್ನು ಹಂಚಿಕೊಂಡ ಸೋದರಿಯರಾದ ನಳಿನಿ ಮೈಯ ಮತ್ತು ಶಶಿಕಲಾ ಚಂದ್ರಶೇಖ‌ರ್ ಅವರಿಗೆ ಪ್ರೀತಿ ಪೂರ್ವಕ ಧನ್ಯವಾದಗಳು. ಲಿಪಿಗಳನ್ನು ಏಕರೂಪಕ್ಕೆ ತಂದು ಮುದ್ರಣಕ್ಕೆ ಸಿದ್ಧಗೊಳಿಸುವ ಕಾರ್ಯದಲ್ಲಿ ಸಹಾಯ ಮಾಡಿದ ಗೆಳೆಯ ಶ್ರೀವತ್ಸ ಜೋಷಿಯವರಿಗೆ ನನ್ನ ಹೃತ್ತೂರ್ವಕ ವಂದನೆಗಳು. ನಮ್ಮ ಕೋರಿಕೆಯನ್ನು ಮನ್ನಿಸಿ ಸುಂದರವಾದ ರಕ್ಷಾಪುಟವನ್ನು ವಿನ್ಯಾಸಮಾಡಿಕೊಟ್ಟ ಕಲಾವಿದ ಹರಿದಾಸ್ ಲಹರಿಯವರಿಗೆ, ಒಳಪುಟಗಳನ್ನು ವಿನ್ಯಾಸ ಮಾಡಿದ ಆರ್. ಎಸ್. ಶ್ರೀಧರ್ ಅವರಿಗೆ ಮತ್ತು ಅಂದವಾಗಿ ಮುದ್ರಿಸಿದ ಧರಣಿ ಪ್ರಿಂಟರ್ಸ್‌ ಹೂವಪ್ಪ ಮತ್ತು ಸಿಬ್ಬಂದಿ ವರ್ಗದವರಿಗೆ ನನ್ನ ಮನಃಪೂರ್ವಕ ವಂದನೆಗಳು.

ಪ್ರಕಟಣೆಯ ಪ್ರತಿ ಹಂತದಲ್ಲೂ ಅಮೂಲ್ಯ ಸಲಹೆಗಳನ್ನಿತ್ತು ಸಹಾಯಹಸ್ತ ಚಾಚಿದ ಅಭಿನವ ರವಿಕುಮಾರ್, ಚಂದ್ರಿಕಾ ಮತ್ತು ಅವರ ಸಂಪಾದಕ ವೃಂದಕ್ಕೆ ನನ್ನ ಅಂತಃಕರಣಪೂರ್ವಕ ಕೃತಜ್ಞತೆಗಳು. ಕವಿತೆಗಳನ್ನೋದಿ ಸೂಕ್ತವಾದ ಮುನ್ನುಡಿ ಬರೆದ ವಿಕ್ರಮ್ ಹತ್ವಾರ್ ಅವರಿಗೂ ಮತ್ತು ಚೊಕ್ಕವಾದ ಬೆನ್ನುಡಿಯನ್ನು ಬರೆದ ಜೋಗಿ ಅವರಿಗೂ ನಾನು ಅತ್ಯಂತ ಋಣಿಯಾಗಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಸಾಹಿತ್ಯದ ಕೆಲಸಕ್ಕೆ ಸಮಯ ಒದಗಿಸಿಕೊಟ್ಟು ತಾಳ್ಮೆಯಿಂದ ಸಹಕರಿಸುತ್ತ ಬಂದಿರುವ ನನ್ನ ಮಡದಿ ಗೀತಾಳಿಗೆ ಮನದಾಳದ ಪ್ರೀತಿಪೂರ್ವಕ ಮೆಚ್ಚುಗೆ.

- ಮೈ. ಶ್ರೀ. ನಟರಾಜ

MORE FEATURES

'ಸಾವಿನ ದಶಾವತಾರ' ಒಬ್ಬ ಭಿನ್ನಮತೀಯ ಕಾದಂಬರಿಕಾರನ ಕೃತಿ; ಎ. ಪಿ. ಅಶ್ವಿನ್ ಕುಮಾರ್

02-06-2024 ಬೆಂಗಳೂರು

"ಪ್ರತೀ ಕಾದಂಬರಿಯೂ ಎರಡು ಕೆಲಸಗಳನ್ನು ಮಾಡುತ್ತಿರುತ್ತದೆ. ಕಾದಂಬರಿ ಎನ್ನುವ ಪ್ರಕಾರವನ್ನು ಬಳಸಿಕೊಂಡು ಒಂದು ಕತೆ...

ಶೀರ್ಷೇಂಧು ಅವರ ಕೃತಿಗಳು ಬದಲಾದ ಆಧುನಿಕ ಸಮಾಜವನ್ನು ಚಿತ್ರಿಸುತ್ತವೆ

02-06-2024 ಬೆಂಗಳೂರು

‘ಈ ಕಥಾ ಸಂಕಲನದಲ್ಲಿ ಆರು ಕಥೆಗಳಿವೆ‌. ಈ ಆರೂ ಕಥೆಗಳು ಆಧುನಿಕ ಬಂಗಾಲದ ಸಾಮಾಜಿಕ ಚಿತ್ರಣವನ್ನು ಕೊಡುತ್ತದೆ...

ವಾರದ ಲೇಖಕ ವಿಶೇಷದಲ್ಲಿ ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ ಬಿ. ಪುಟ್ಟಸ್ವಾಮಯ್ಯ

02-06-2024 ಬೆಂಗಳೂರು

"ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ, ಕಥೆಗಾರ, ಕವಿಯಾಗಿ ಮನ...