ಎಲ್ಲವನ್ನೂ ಉಡಿಯಲ್ಲಿ ತುಂಬಿಕೊಂಡು ಹರಿಯುತ್ತಿರುವ ಜಯಂತರ ಅಂತರಗಂಗೆ ಕಲರವ


'ಜಯಂತ್ ಕಾಯ್ಕಿಣಿಯವರ ಶೈಲಿಯ ಸ್ವಾದವಿರುವುದೇ ಅವರು ಕಟ್ಟಿ ಕೊಡುವ ಚಿತ್ರಣಗಳ ಸೂಕ್ಷ್ಮವಾದ  ವರ್ಣನೆ ಮತ್ತು ಅವರ ಕಣ್ಣುಗಳಿಂದ ನಾವು ನೋಡಿದಾಗ ಬರಹ ಪಡೆಯುವ ಚೆಲುವಿನಿಂದ. ಅದರ ಜೊತೆಗೆ ಇವರ ಹಾಸ್ಯ ಪ್ರಜ್ಞೆ ವಿಶೇಷ' ಎನ್ನುತ್ತಾರೆ ಪೂರ್ಣಿಮಾ ಮಾಳಗಿಮನೆ ಅವರು ಜಯಂತ ಕಾಯ್ಕಿಣಿ ಅವರ ತಾರಿ ದಂಡೆ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ. 

ಕೆಲವರು ಬಹಳ ಚೆನ್ನಾಗಿ ಬರೆಯುತ್ತಾರೆ. ಮತ್ತು ಕೆಲವರು ಬಹಳ ಚೆನ್ನಾಗಿ ಮಾತನಾಡುತ್ತಾರೆ. ಆದರೆ ಜಯಂತ್ ಕಾಯ್ಕಿಣಿಯವರು ಅದ್ಭುತವಾಗಿ ಬರೆಯಬಲ್ಲರು ಮತ್ತು ಅತ್ಯಮೂಲ್ಯವಾದ ವಿಚಾರಗಳನ್ನು ಮಾತುಗಳಲ್ಲಿ ಹಂಚಿಕೊಳ್ಳಬಲ್ಲರು.

ಹಾಗೇ ಕೆಲವು ಸಾಹಿತ್ಯಾಸಕ್ತರಿಗೆ ಮುದ್ರಿತ ಪುಸ್ತಕವನ್ನು ಹಿಡಿದುಕೊಂಡು ಓದುವುದು ಮಾತ್ರವೇ ಇಷ್ಟ. ಇನ್ನು ಕೆಲವರಿಗೆ ಸಾಹಿತ್ಯ ಮತ್ತು ಸಾಹಿತಿಗಳ ಮಾತುಗಳನ್ನು ಕೇಳುವುದು ಮಾತ್ರ ಇಷ್ಟ.  ಸಹಜವಾಗಿಯೇ ಜಯಂತ್ ಕಾಯ್ಕಿಣಿ ಅವರಿಗೆ ಈ ಎರಡೂ ರೀತಿಯ ಅಭಿಮಾನಿಗಳ ಜೊತೆಗೆ ಕನ್ನಡ ಸಿನಿಮಾ ಹಾಡುಗಳನ್ನು ಕೇಳುವವರೂ ಇದ್ದಾರೆ. ಅವರ ಇತ್ತೀಚಿನ ಹೊಸ ಪುಸ್ತಕ 'ತಾರಿ ದಂಡೆ' ಮೇಲೆ ಹೇಳಿದ ಎಲ್ಲಾ ರೀತಿಯ ಅಭಿಮಾನಿಗಳಿಗೆ ಹೇಳಿ ಬರೆಸಿದಂತಿದೆ. 

ಇಲ್ಲಿ ಕವಿತೆಗಳಿಲ್ಲ, ಕಥೆಗಳಿಲ್ಲ; ಇದು ಕಾದಂಬರಿಯಲ್ಲ, ನಾಟಕವೂ ಅಲ್ಲ. ಆದರೆ ಎಲ್ಲದರ ಸೊಗಡೂ ಇಲ್ಲಿ ಸಿಗುವಂತಿದೆ. ಈ ಪುಸ್ತಕದ ಕವಚದಲ್ಲಿ ಬರೆದಿರುವ ಈ ಸಾಲುಗಳು ಅದೆಷ್ಟು ಸೊಗಸಾಗಿವೆ ನೋಡಿ. "ತಟದಲ್ಲಿ ಮರವಿದ್ದರೆ ನದಿಗೆ ಹಿಗ್ಗು. ಅದು ತನ್ನ ಉಡಿಗೆ ಬಿದ್ದ ಹೂಗಳನ್ನು, ಎಲೆಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಹರಿಯುತ್ತಲೇ ಇರುತ್ತದೆ. ಆಗ ಮರ ಯಾವುದು? ನದಿ ಯಾವುದು?"

ನಿಂತಲ್ಲೇ ನಿಂತಿರುವ ಮರವನ್ನು ನದಿಯಾಗಿಸಿ, ನಿಲ್ಲಲಾಗದೆ ಹರಿಯುತ್ತಲೇ ಇರುವ ನದಿಗೂ ಮರದ ನೆಲೆಗಾಣಿಸಿರುವ ಈ ಕಲ್ಪನೆಯಂತೆ 'ತಾರಿ ದಂಡೆ'ಯನ್ನು ಖ್ಯಾತ ಸಾಹಿತಿ ತಂದೆ ಗೌರೀಶ ಕಾಯ್ಕಿಣಿ ಎಂಬ ಹೆಮ್ಮರ ಮತ್ತು ಅವರಂತೆಯೇ ಪ್ರಭಾವಿಸಿದ ಹಲವು ಲೇಖಕರ ಕಥೆಗಳು, ಕವಿತೆಗಳು, ಕಾದಂಬರಿಗಳು, ಪತ್ರಿಕಾ ವರದಿಗಳು, ಪತ್ರಗಳು, ಪಾತ್ರಗಳು ಎಲ್ಲವನ್ನೂ ಉಡಿಯಲ್ಲಿ ತುಂಬಿಕೊಂಡು ಹರಿಯುತ್ತಿರುವ ಜಯಂತರ ಅಂತರಗಂಗೆಯ ಕಲರವ ಎನ್ನಬಹುದು. ಸೆಲೆಬ್ರಿಟಿ ಲೇಖಕರ ವೈಯಕ್ತಿಕ ಜೀವನದ ಬಗ್ಗೆ ಓದುಗರಿಗೆ ಮತ್ತು ಹೊಸ ಬರಹಗಾರರಿಗಿರುವ ಕುತೂಹಲವನ್ನು ತಣಿಸುವ ಹತ್ತು ಹಲವು ಝಲಕುಗಳನ್ನು ತೋರಿಸುವ ಕಿಂಡಿ ಅಂತಲೂ ಹೇಳಬಹುದೇನೋ! 

'ತಾರಿ ದಂಡೆ' ಅಂದರೆ ನದಿ ದಾಟಿಸುವ ದೋಣಿಯನ್ನು ಜನ ಹಿಡಿಯುವ ಜಾಗ. ಈ ಕೃತಿಯ ಮೊದಲ ಭಾಗ, ಸ್ಕೂಲಿನಲ್ಲಿ ನಡೆಯುವ ಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯ ಇಮೇಜುಗಳನ್ನು, ಊರು ಕೇರಿಗಳ ಜನ ಜೀವನ, ದಿನ ನಿತ್ಯದ ಪರಿ ಪಾಟಲನ್ನು, ಲೋಕೋದ್ಧಾರದ ಯಾವ ಉದ್ದೇಶವೂ ಇಲ್ಲದೆ, ತಮಗರಿವಿಲ್ಲದಂತೆಯೇ ಏನೋ ಒಂದು ವಿಚಾರವನ್ನು ಮನಗಾಣಿಸುವ ಮಾರುವೇಷದ ಇಷ್ಟದೇವತೆಗಳನ್ನೂ, ಕವಿತೆಯ ಹುಟ್ಟು, ಅದು ಪಸರಿಸುವ ಪರಿಮಳ ಎಲ್ಲವನ್ನೂ, "ಕಾಯುವುದಿಲ್ಲ ಯಾರೂ ಕವಿತೆಗೆ, ಕವಿಯೊಬ್ಬನಲ್ಲದೆ" ಎನ್ನುವ ಕೆ. ವಿ. ತಿರುಮಲೇಶರ ಸಾಲನ್ನು ಪ್ರಸ್ತಾಪಿಸುತ್ತಾ ಒಬ್ಬ ಕವಿಯ ಕಣ್ಣುಗಳಿಂದ ತೋರಿಸುತ್ತದೆ. ಕಾವ್ಯ ಒಂದು ಸಮಾಜದ ಕಾರ್ಡಿಯೋಗ್ರಾಮ್ ಅಥವಾ ಇಸಿಜಿ ಇದ್ದಂತೆ ಎಂದು ಹೇಳುತ್ತಲೇ, ಲೇಖಕನಾಗಬಯಸುವವನು ಎಷ್ಟು ಸೂಕ್ಷ್ಮ ಕಣ್ಣುಗಳಿಂದ ಎಲ್ಲವನ್ನೂ ಗಮನಿಸುತ್ತಿರಬೇಕು ಎನ್ನುವುದನ್ನು ಈ ಭಾಗ ಅದ್ಭುತವಾಗಿ ಪ್ರತಿಪಾದಿಸುತ್ತದೆ. ಜಯಂತ್ ಕಾಯ್ಕಿಣಿಯವರ ಶೈಲಿಯ ಸ್ವಾದವಿರುವುದೇ ಅವರು ಕಟ್ಟಿ ಕೊಡುವ ಚಿತ್ರಣಗಳ ಸೂಕ್ಷ್ಮವಾದ  ವರ್ಣನೆ ಮತ್ತು ಅವರ ಕಣ್ಣುಗಳಿಂದ ನಾವು ನೋಡಿದಾಗ ಬರಹ ಪಡೆಯುವ ಚೆಲುವಿನಿಂದ. ಅದರ ಜೊತೆಗೆ ಇವರ ಹಾಸ್ಯ ಪ್ರಜ್ಞೆ ವಿಶೇಷ.  

ಬೇಂದ್ರೆಯವರು ಅನುವಾದಿಸಿರುವ ಟಾಗೋರರ ಕಿರುಗವಿತೆ, 

"ಬೆಂಗಡೆಯಲ್ಲಿ ಬಂದು ನೀನು 
ನನ್ನ ಕಣ್ಣು ಮುಚ್ಚಲು
ಕತ್ತಲು ಕಳೆಯಿತು
ಬೆಳಕಾಯಿತು" 

ಮತ್ತು ಗಂಗಾಧರ ಚಿತ್ತಾಲರ 
"ಈ ಮುಖೋದ್ಗತ 
ನಿನ್ನ ಹೃದ್ಗತವೆ ಆದ ದಿನ 
ಸುದಿನ 
ಆವರೆಗು ಇದು 
ತಕ್ಕ ಮಣ್ಣಿನ ತೇವಕಾಗಿ 
ಕಾದೇ ಇರುವ ಬೀಜ" 
ಇವುಗಳ ಉಲ್ಲೇಖ ಕವಿ ಸಮಯ ಎನ್ನುವ ಈ ಅಧ್ಯಾಯವನ್ನು ಪರಿಪೂರ್ಣಗೊಳಿಸಿದೆ.  

ಎರಡನೆಯ ಭಾಗದಲ್ಲಿ ಇವರನ್ನು ಪ್ರಭಾವಿಸಿದ ವ್ಯಕ್ತಿಗಳ ಪರಿಚಯವಿದೆ. ತಾಯಿ ಶಾಂತಾ, ಕಾರ್ನಾಡ್, ಎಸ್ ದಿವಾಕರ್, ಬಾಲೂರಾವ್, ಜಿ ರಾಜಶೇಖರ್, ನಾಗೇಶ ಹೆಗಡೆ, ಮುಕುಂದ ಜೋಷಿ, ನಟ ಇರ್ಫಾನ್ ಖಾನ್ ಮತ್ತಿತರರ ವ್ಯಕ್ತಿ ವೈಶಿಷ್ಟ್ಯ ಮತ್ತು ಅವರ ಸ್ನೇಹ, ಸಾಂಗತ್ಯದಿಂದ ದೊರೆತ ರಂಜನೆ, ಕಲಿಕೆ, ಸ್ನೇಹ, ಸಂತೋಷಗಳ ತುಣುಕುಗಳು ಸಂದರ್ಭ ಸಹಿತ ತೆರೆದುಕೊಂಡಿವೆ. ಓಹ್ ಇವರಿಗೆ ಅವರ ಪರಿಚಯವಿತ್ತೇ? ಅವರು ಇವರನ್ನು ಹೀಗೆ ಕರೆಯುತ್ತಿದ್ದರೆ ಎನ್ನುವಂಥ ಸೋಜಿಗದ ಉದ್ಘಾರಗಳೂ ಓದುಗರಿಂದ. ಒಮ್ಮೆ ಯಾವುದೋ ಚರ್ಚೆಯಲ್ಲಿ ಸುಮ್ಮನಿದ್ದ ಗಿರೀಶ್ ಕಾರ್ನಾಡ್ ಅವರಿಗೆ, "ನೀವ್ಯಾಕೆ ಸುಮ್ಮನಿದ್ದೀರಿ?" ಎಂದು ಕೇಳಿದಾಗ, "ನೋಡಿ ಕಪ್ಪಣ್ಣಾ, ನಾನು ಸುಮ್ಮನಿದ್ದರೆ ಮೂರ್ಖ ಅಂತ ಅನ್ನಿಸ್ಕೊಬಹುದು. ಆದ್ರೆ ಬಾಯಿ ಹಾಕಿದ್ರೆ ಮೂರ್ಖ ಅಂತ ನಾನೆ ಪ್ರೂವ್ ಮಡಿದ ಹಾಗೆ ಆಗ್ತದೆ." ಎಂದರಂತೆ. ಸ್ವಂತದ ಕುರಿತೇ ಲೇವಡಿ ಮಾಡಿಕೊಳ್ಳುತ್ತಿದ್ದ ಕಾರ್ನಾಡರ ಈ ಮುಖದ ಪರಿಚಯ ಇಲ್ಲಿದೆ. ತಮ್ಮ ತಾಯಿ ಶಾಂತಾರವರನ್ನು ಇಲ್ಲಿ ಪರಿಚಯಿಸಿರುವ ರೀತಿ ಬಹಳ ಇಷ್ಟವಾಯ್ತು. ಎಲ್ಲಿಯೂ ಹೊಗಳದೆ ಅವರನ್ನು ಪ್ರೀತಿಸುವಂತೆ ಮಾಡುವ ಶಕ್ತಿ ಈ ಬರಹಕ್ಕಿದೆ. 

ಮೂರನೆಯ ಭಾಗದಲ್ಲಿ ಪ್ರಮೀಳಾ ಸ್ವಾಮಿ ಅವರ 'ಊರೆಂಬ ಉದರ' ಕೃತಿ, ಯಶವಂತ ಚಿತ್ತಾಲರ 'ಪುರುಷೋತ್ತಮ' ಕೃತಿಯ ಪಾತ್ರದ ವಿಶ್ಲೇಷಣೆ, ಅವರದ್ದೇ 'ಛೇದ' ಕಾದಂಬರಿಯ ಸಂಗತಿಗಳು, ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಪತ್ರಿಕೆಗಳ ಪಾತ್ರ ಮತ್ತು ಪ್ರಾಮುಖ್ಯತೆ ಕುರಿತ ವಿಚಾರಗಳು, ಆತ್ಮಕಥೆ ಬರೆಯುವ ಪರಿಪಾಠ, ಆತ್ಮಕತೆ ಯಾಕೆ ಬರೆಯುತ್ತಾರೆ ಎನ್ನುವ ಕುತೂಹಲ, ಮತ್ತು ಅದು ಇವರಿಗೆ ಏಕೆ ಅಷ್ಟು ಸೇರುವುದಿಲ್ಲ ಎನ್ನುವ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 

ಕೊನೆಯಲ್ಲಿ, ಮತ್ತೊಂದು ಅದ್ಭುತವಾದ ಇಮೇಜ್. "ಮುಂಡಾಸಿನಂತೆ ಟಾರ್ಪೋಲಿನ್ ಸುತ್ತಿಕೊಂಡು ಸಾಗುತ್ತಿರುವ ಲಾರಿಗಳು. ಒಳಗೆ ಯಾರೂ ಇಲ್ಲವೇನೋ ಎಂದು ಭಾಸ ಹುಟ್ಟಿಸುವ ಅಪಾರದರ್ಶಕ ಬಸ್ಸುಗಳು. ಲೇಸ್ ಇಲ್ಲದ ಒಂಟಿ ಸ್ಪೋರ್ಟ್ಸ್ ಬೂಟಿನಂತೆ ತೋರುವ ಕಾರುಗಳು. ಊರಿಗೆ ಊರನ್ನೇ ಓವರ್ ಟೇಕ್ ಮಾಡುವ ಹೆದ್ದಾರಿಯ ಊಳು... " 

ಒಟ್ಟಾರೆ ಸಾಹಿತ್ಯ ಪ್ರೇಮಿಗಳೆಲ್ಲ ಆಸ್ವಾದಿಸಬಹುದಾದ ಪುಸ್ತಕ ತಾರಿ ದಂಡೆ!

-ಪೂರ್ಣಿಮಾ ಮಾಳಗಿಮನಿ

(ಪ್ರಕಟಿತ ಲೇಖನ- ಕೃಪೆ- ವಿಜಯ ಕರ್ನಾಟಕ) 

MORE FEATURES

'ಸಾವಿನ ದಶಾವತಾರ' ಒಬ್ಬ ಭಿನ್ನಮತೀಯ ಕಾದಂಬರಿಕಾರನ ಕೃತಿ; ಎ. ಪಿ. ಅಶ್ವಿನ್ ಕುಮಾರ್

02-06-2024 ಬೆಂಗಳೂರು

"ಪ್ರತೀ ಕಾದಂಬರಿಯೂ ಎರಡು ಕೆಲಸಗಳನ್ನು ಮಾಡುತ್ತಿರುತ್ತದೆ. ಕಾದಂಬರಿ ಎನ್ನುವ ಪ್ರಕಾರವನ್ನು ಬಳಸಿಕೊಂಡು ಒಂದು ಕತೆ...

ಶೀರ್ಷೇಂಧು ಅವರ ಕೃತಿಗಳು ಬದಲಾದ ಆಧುನಿಕ ಸಮಾಜವನ್ನು ಚಿತ್ರಿಸುತ್ತವೆ

02-06-2024 ಬೆಂಗಳೂರು

‘ಈ ಕಥಾ ಸಂಕಲನದಲ್ಲಿ ಆರು ಕಥೆಗಳಿವೆ‌. ಈ ಆರೂ ಕಥೆಗಳು ಆಧುನಿಕ ಬಂಗಾಲದ ಸಾಮಾಜಿಕ ಚಿತ್ರಣವನ್ನು ಕೊಡುತ್ತದೆ...

ವಾರದ ಲೇಖಕ ವಿಶೇಷದಲ್ಲಿ ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ ಬಿ. ಪುಟ್ಟಸ್ವಾಮಯ್ಯ

02-06-2024 ಬೆಂಗಳೂರು

"ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ, ಕಥೆಗಾರ, ಕವಿಯಾಗಿ ಮನ...